ಕೆನಡಾ ಮೂಲದ ರೇಡಿಯೊ ಸಂಪಾದಕರ ಮೇಲೆ ಖಾಲಿಸ್ತಾನ್ ಬೆಂಬಲಿಗರ ಹಲ್ಲೆ
Update: 2024-09-30 22:08 IST
PC: PTI
ಒಟ್ಟಾವ: ಖಾಲಿಸ್ತಾನ್ ಗುಂಪಿನ ಕೃತ್ಯಗಳನ್ನು ಟೀಕಿಸುತ್ತಿದ್ದ ಕೆನಡಾ ಮೂಲದ ರೇಡಿಯೊ ಎಫ್‍ಎಂ ಕ್ಯಾಲ್ಗರಿಯ ಸಂಪಾದಕ ರಿಷಿ ನಾಗರ್ ಮೇಲೆ ಖಾಲಿಸ್ತಾನ್ ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಕಳೆದ ವಾರ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನಾಗರ್‍ರನ್ನು ಅಡ್ಡಗಟ್ಟಿದ ಖಾಲಿಸ್ತಾನ್ ಬೆಂಬಲಿಗರ ಗುಂಪು ಹಲ್ಲೆ ನಡೆಸಿದ್ದು ನಾಗರ್ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆದರೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.
ಈ ಘಟನೆ ಕೆನಡಾದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಖಾಲಿಸ್ತಾನ್ ಬೆಂಬಲಿಗರ ಕೃತ್ಯಗಳನ್ನು ವಿರೋಧಿಸುವವರ ವಿರುದ್ಧ ಹಲ್ಲೆ, ಬೆದರಿಕೆ ಕೃತ್ಯಗಳು ಹೆಚ್ಚುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.