×
Ad

ಸಾವಿರಕ್ಕೂ ಅಧಿಕ ಇಂಡಿಗೋ ವಿಮಾನಯಾನ ರದ್ದು; ನಾಳೆ ಡಿ.6ರಂದೂ ಸಾವಿರ ಯಾನಗಳ ರದ್ದು ಸಾಧ್ಯತೆ

Update: 2025-12-05 22:11 IST

Photo Credit ; goindigo.in

ಹೊಸದಿಲ್ಲಿ, ಡಿ. 5: ಇಂಡಿಗೋ ವಿಮಾನಗಳ ಬೃಹತ್ ಸಂಚಾರ ವ್ಯತ್ಯಯ ಶುಕ್ರವಾರ ತಾರಕಕ್ಕೇರಿದ್ದು, ಈ ದಿನ 1,000ಕ್ಕೂ ಅಧಿಕ ಯಾನಗಳನ್ನು ರದ್ದುಪಡಿಸಲಾಗಿದೆ. ಇದು ವಿಮಾನಯಾನ ಇತಿಹಾಸದಲ್ಲೇ ಒಂದು ದಿನದಲ್ಲಿ ರದ್ದಾದ ಅತ್ಯಧಿಕ ಸಂಖ್ಯೆಯ ವಿಮಾನಯಾನವಾಗಿದೆ.

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯು ಶುಕ್ರವಾರ ತನ್ನ ದೈನಂದಿನ ಯಾನಗಳ ಪೈಕಿ ಅರ್ಧಕ್ಕೂ ಹೆಚ್ಚಿನ ಯಾನಗಳನ್ನು ಶುಕ್ರವಾರ ರದ್ದುಪಡಿಸಿದೆ.

ಶುಕ್ರವಾರ ಸಂಜೆ ಪ್ರಕಟನೆಯೊಂದನ್ನು ಹೊರಡಿಸಿದ ಇಂಡಿಗೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಬರ್ಸ್, ಈ ಅವ್ಯವಸ್ಥೆಗಾಗಿ ಪ್ರಯಾಣಿಕರ ಕ್ಷಮೆ ಕೋರಿದ್ದಾರೆ.

ಅದೇ ವೇಳೆ, ವಿಮಾನಯಾನಗಳ ವ್ಯತ್ಯಯವು ಶನಿವಾರವೂ ಮುಂದುವರಿಯಲಿದೆಯಾದರೂ, ಸಾವಿರಕ್ಕಿಂತ ಕಡಿಮೆ ಯಾನಗಳು ರದ್ದಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

‘‘ಡಿಸೆಂಬರ್ 10 ಮತ್ತು 15ರ ನಡುವೆ ಪರಿಸ್ಥಿತಿಯು ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಆದರೂ, ಯಾನಗಳ ಬೃಹತ್ ಸಂಖ್ಯೆಯ ಹಿನ್ನೆಲೆಯಲ್ಲಿ, ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ’’ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಇಂಡಿಗೋ ಪ್ರತಿದಿನ ಸುಮಾರು 2,300 ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಏರ್ಪಡಿಸುತ್ತದೆ.

ವಿವಿಧ ಕಾರಣಗಳಿಂದಾಗಿ ವಿಮಾನ ಯಾನಗಳ ವಿಳಂಬ ಮತ್ತು ರದ್ದತಿ ಸಂಭವಿಸಿದೆ ಎಂದು ಪೀಟರ್ ಎಲ್ಬರ್ಸ್ ಹೇಳಿದರು.

ಇಂಡಿಗೋ ವಿಮಾನ ರದ್ದತಿ; ಉನ್ನತ ಮಟ್ಟದ ತನಿಖೆಗೆ ಕೇಂದ್ರ ಆದೇಶ

ಇಂಡಿಗೋ ವಿಮಾನಯಾನಗಳ ಬೃಹತ್ ಸಂಖ್ಯೆಯ ರದ್ದತಿ ಮತ್ತು ವಿಳಂಬದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು ಮತ್ತು ಉತ್ತರದಾಯಿತ್ವವನ್ನು ನಿಗದಿಪಡಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ ಪ್ರಕಟನೆಯೊಂದರಲ್ಲಿ ಘೋಷಿಸಿದ್ದಾರೆ.

ಈ ಪ್ರಕಟನೆ ಹೊರಬಿದ್ದ ನಿಮಿಷಗಳಲ್ಲೇ, ವಿಮಾನಯಾನಗಳ ವಿಳಂಬ ಮತ್ತು ರದ್ದತಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಘೋಷಿಸಿದೆ.

ಪೈಲಟ್‌ಗಳಿಗೆ ಅಗತ್ಯವಿರುವಷ್ಟು ವಿಶ್ರಾಂತಿಯನ್ನು ನೀಡುವ ಉದ್ದೇಶದ ‘ವಿಮಾನಯಾನ ಕರ್ತವ್ಯ ಅವಧಿ ಮಿತಿಗಳು’ ನಿಯಮದ ಕೆಲವು ವಿಧಿಗಳಿಗೆ ವಿನಾಯಿತಿ ನೀಡಿರುವುದನ್ನು ಸಮರ್ಥಿಸಿಕೊಂಡ ಅವರು, ಪ್ರಯಾಣಿಕರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದರು. ಆದರೆ, ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದಾಗಿಯೂ ಅವರು ಹೇಳಿದರು.

ಹಾರದ ವಿಮಾನ | ಇಂಡಿಗೋ ಸಿಬ್ಬಂದಿಯಿಂದ ಬಹಿರಂಗ ಪತ್ರ? 

ಇಂಡಿಗೋ ವಿಮಾನಯಾನಗಳ ಭಾರೀ ಪ್ರಮಾಣದ ವಿಳಂಬ ಮತ್ತು ರದ್ದತಿಯ ಹಿನ್ನೆಲೆಯಲ್ಲಿ, ಇಂಡಿಗೋ ಸಂಸ್ಥೆಯ ಪೈಲಟ್‌ಗಳು, ವಿಮಾನದ ಒಳಗಿನ ಸಿಬ್ಬಂದಿ ಮತ್ತು ಹೊರಗಿನ ಸಿಬ್ಬಂದಿ ಬರೆದಿರುವರೆನ್ನಲಾದ ‘‘ಬಹಿರಂಗ ಪತ್ರ’’ವೊಂದು ವೈರಲ್ ಆಗಿದೆ.

ಪ್ರಸಕ್ತ ಅವ್ಯವಸ್ಥೆಯು ಕೇವಲ ಕಾರ್ಯನಿರ್ವಹಣೆ ವೈಫಲ್ಯವಲ್ಲ, ಅದು ಯೋಜನೆ ಮತ್ತು ಪ್ರಾಥಮಿಕ ಸುರಕ್ಷತೆಯ ವೈಫಲ್ಯವಾಗಿದೆ ಎಂದು ಪತ್ರ ಹೇಳುತ್ತದೆ.

ಪ್ರಯಾಣಿಕರ ಆಕ್ರೋಶ, ನಿಂದನೆ ಮತ್ತು ದೂಷಣೆಗಳನ್ನು ಎದುರಿಸಿದ್ದು ಇಂಡಿಗೋದ ಉದ್ಯೋಗಿಗಳು, ಆದರೆ, ವ್ಯವಸ್ಥೆ ಕುಸಿಯಲು ಕಾರಣವಾದ ಆಯಕಟ್ಟಿನ ನಿರ್ಧಾರಗಳನ್ನು ತೆಗೆದುಕೊಂಡವರು ಇದರ ಪರಿಣಾಮಗಳಿಂದ ದೂರವಿದ್ದಾರೆ ಎಂದು ಪತ್ರ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News