ಮೊದಲ ಹಂತದ ಚುನಾವಣೆ ಬಳಿಕ ಪ್ರಧಾನಿ ಮಾತಿನ ಶೈಲಿಯಲ್ಲಿ ಬದಲಾವಣೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-04-24 08:40 GMT

ಕಲಬುರಗಿ : ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಮತ ಬಂದಿಲ್ಲ ಎಂದು ಮನವರಿಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿಯೇ ಬದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಳೆದ ಮೂರು ದಿನಗಳ ಹಿಂದೆ ರಾಜಸ್ಥಾನದಲ್ಲಿ ಚುನಾವಣಾ ಭಾಷಣ ಮಾಡಿದ ಮೋದಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಕಿತ್ತು ಮುಸ್ಲಿಮರ ಕೈಗೆ ಕೊಡುತ್ತದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳು ಹತಾಶೆರಾಗಿರುವುದು ತೋರಿಸುವುದರ ಜೊತೆಗೆ ಪ್ರಧಾನಿ ಹುದ್ದೆಯ ಘನತೆಗೆ ಕುಂದು ಉಂಟಾಗುವಂತೆ ಇವೆ" ಎಂದು ಟೀಕಿಸಿದರು.

"ಮೋದಿಯವರು ಈ ಹೇಳಿಕೆ ನೀಡಿ ಮೂರು ದಿನಗಳಾಗಿವೆ, ಕನಿಷ್ಠ 20 ಸಾವಿರ ಜನರು ಸಹಿ ಹಾಕಿರುವ ದೂರನ್ನು ಸಲ್ಲಿಸಲಾಗಿದೆ. ಕಾಂಗ್ರೆಸ್ ನಾಯಕರ ಮೇಲೆ ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಚುನಾವಣಾ ಆಯೋಗ ಈಗ ನಿದ್ದೆ ಮಾಡುತ್ತಿದೆಯಾ? ಅಥವಾ ಸತ್ತಿದೆಯಾ? ಸಂವಿಧಾನ ಬದ್ಧ ಸ್ವಾಯತ್ತ ಸಂಸ್ಥೆಯಾದ ಆಯೋಗ ಈ ವಿಚಾರದಲ್ಲಿ ಸುಮ್ಮನಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಧೋರಣೆ ಅನುಸರಿಸುತ್ತಿರುವುದು ನೋಡಿದರೆ ಆಯೋಗವೂ ಕೂಡಾ ಬಿಜೆಪಿ ಮುಂಚೂಣಿ ಘಟಕದಂತೆ ಕಾಣುತ್ತಿದೆ ಹಾಗಾಗಿ ಅದು ತನ್ನ ಬೋರ್ಡ್ ಬದಲಿಸಲಿ"  ಎಂದು ಆಕ್ರೋಶ ವ್ಯಕ್ತಪಡಿಸಿದರು.

ತ್ರಿವಳಿ ತಲಾಖ್, ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರದ ‌ಮುಸ್ಲಿಮರು ಸ್ವಾಭಿಮಾನಿಗಳಾಗಿ ಜೀವಿಸುವಂತೆ ಮಾಡಿರುವುದಾಗಿ ಹೇಳಿದ್ದರು. ಆದರೆ, ಮೊದಲ ಹಂತದ ಚುನಾವಣೆಯ ನಂತರ ಮುಸ್ಲಿಮರ ಕುರಿತಂತೆ ಹೇಳಿಕೆ ನೀಡುತ್ತಿದ್ದಾರೆ. ಎಸ್ ಸಿ‌ ಹಾಗೂ ಎಸ್ ಟಿಗಳ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಹಂಚುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ. ಇದು ಮೋದಿ ಅವರು ಹತಾಶೆಯನ್ನು ತೋರಿಸುತ್ತದೆ" ಎಂದು ಕಿಡಿಕಾರಿದರು.

" ರಾಜಸ್ಥಾನದಲ್ಲಿ ರಾಮನ ಹೆಸರಿನಲ್ಲಿ ಮತ ಕೇಳುತ್ತಾರೆ. ಹನುಮಾನ್ ಚಾಲೀಸಾ ಹೇಳಿದರೆ ಹಲ್ಲೆ ಮಾಡಲಾಗುತ್ತದೆ ಎಂದು ಪ್ರಚಾರ ಭಾಷಣದಲ್ಲಿ ಹೇಳುತ್ತಾರೆ. ಸ್ವತಃ ಬಿಜೆಪಿಯ ಶಾಸಕ ಗರುಡಾಚಾರ್ ಈ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಎಫ್ ಐ ಆರ್ ನಲ್ಲಿಯೂ ಉಲ್ಲೇಖಿಸಿಲ್ಲ. ಆದರೂ ಕೂಡಾ ರಾಜ್ಯದ ಮರ್ಯಾದೆ ಹಾಳು ಮಾಡುವ ಹೇಳಿಕೆಯನ್ನು ಮೋದಿ ನೀಡಿದ್ದಾರೆ. ಇತ್ತೀಚಿಗೆ ನಾಗಪುರಕ್ಕೆ ಭೇಟಿ ನೀಡಿದ ನಂತರ ಮೋದಿ ವರಸೆ ಬದಲಾಗಿದೆ" ಎಂದು ತಿಳಿಸಿದರು.

"ಬಿಜೆಪಿ 400 ಸೀಟು ಎಂದು ಕನವರಿಸುತ್ತಿದೆ. ಸದ್ಯ ಮೇಲ್ಮನೆಯಲ್ಲಿ ಅವರಿಗೆ ಬಹುಮತ ಇಲ್ಲ. ಒಂದು ವೇಳೆ 400 ಸೀಟು ಗೆದ್ದರೆ ಅವರಿಗೆ ಮೇಲ್ಮನೆಯಲ್ಲೂ ಬಹುಮತ ಸಿಗಲಿದೆ. ಆಗ ಸಂವಿಧಾನ ಬದಲಾಯಿಸಬಹುದು ಎಂದು ಹುನ್ನಾರ ನಡೆಸಿದೆ. ಇದಕ್ಕೆ‌ ಪುಷ್ಠಿ ನೀಡುವಂತೆ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ. ಮೋದಿಯಾಗಲಿ ಅಥವಾ ಬಿಜೆಪಿಯ ಯಾವ ನಾಯಕರಾಗಲೀ ಅಧಿಕೃತವಾಗಿ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಈ ಸಲ ಅಬ್ ಕೀ ಬಾರ್ ಚಾರ್ ಸೌ ಪಾರ್ ಆಗಲ್ಲ " ಎಂದರು.

"ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಎಲ್ಲರ ಆಸ್ತಿಯನ್ನು ಆತಂಕವಾದಿಗಳಿಗೆ ಹಾಗೂ ಹೆಚ್ಚು ಮಕ್ಕಳು ಇದ್ದವರಿಗೆ ಹಂಚುತ್ತಾರೆ ಎಂದು ಹೇಳುತ್ತಾರೆ. ಬಿಜೆಪಿಯವರಿಗೆ ಅರಿವಿದೆಯಾ? ಸಂವಿಧಾನದಲ್ಲಿ‌ ಇದು ಸಾಧ್ಯವೇ? ಎಂದು ಪ್ರಶ್ನಿಸಿದ ಸಚಿವರು, ಬಿಜೆಪಿಯವರಿಗೆ ಭಾಷಣ ಮಾಡಲು ವಿಷಯಗಳೇ ಇಲ್ಲ. ಭಯೋತ್ಪಾದನೆ, ಮೊಘಲ್, ರಾಮಮಂದಿರ, ಹನುಮಾನ ಚಾಲೀಸಾ, ರಾಹುಲ್ ಗಾಂಧಿ ಹಾಗೂ ಖರ್ಗೆ ಬಿಟ್ಟರೇ ಬೇರೆ ವಿಚಾರಗಳೇ ಇಲ್ಲ ಎಂದು ಲೇವಡಿ ಮಾಡಿದರು.

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಕೊಲೆಯಾದ ನೇಹಾ ಹಿರೇಮಠ್ ಅವರ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, "ಪೂಜ್ಯ ಅಪ್ಪಾಜಿಯವರ ಮೇಲೆಯೂ ಕೂಡಾ ಒಂದು ಕೇಸ್ ದಾಖಲಾಗಿದೆ. ಅಲ್ಲಿಗೆ ಯಾಕೆ ಭೇಟಿ ನೀಡಿಲ್ಲ" ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ರಾಜಗೋಪಾಲ ರೆಡ್ಡಿ, ಡಾ. ಕಿರಣ್ ದೇಶಮುಖ್, ಪ್ರವೀಣ್ ಹರವಾಳ, ಶಿವಕುಮಾರ ಹೊನಗುಂಟಿ, ಈರಣ್ಣ ಝಳಕಿ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News