ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ? : ಡಿಸಿಎಂ ಡಿ‌.ಕೆ.ಶಿವಕುಮಾರ್

Update: 2024-04-26 10:51 GMT

ಬೆಂಗಳೂರು : “ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ ಹೇಳಿ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯವರು ಏನನ್ನು ಹಂಚುತ್ತಿದ್ದಾರೆ ಎಂದು ತೋರಿಸಲೆ. ಅವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ನಾನೇನು ಎನ್ನುವುದು ಜನಕ್ಕೆ ಗೊತ್ತಿದೆ. ನಾನು ಖಂಡಿತವಾಗಿಯೂ ಸತ್ಯ ಹರಿಶ್ಚಂದ್ರ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಶಿವಕುಮಾರ್ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಪನ್ ಕಾರ್ಡ್ ಗಳನ್ನು ಹಂಚುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಮುನಿರತ್ನ, ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಹಂಚುತ್ತಿದ್ದಾರೆ. ನಾವು ಹಂಚುತ್ತಿರುವುದು ನಮ್ಮ ಪ್ರಣಾಳಿಕೆ ಕಾರ್ಡ್” ಎಂದು ಹೇಳಿದರು.

10 ಸಾವಿರ ಮೌಲ್ಯದ ಕೂಪನ್ ಕಾರ್ಡ್ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದಾಗ “ಇಷ್ಟಾದರೂ ಭಯ ಬಂದಿದೆಯಲ್ಲ. ಹೆದರಿಕೊಂಡು ರಣಹೇಡಿಗಳಂತೆ ಬೇರೆ ಕಡೆ ಹೋಗಿದ್ದಾರೆ‌. ಅವರೇ ಚುನಾವಣೆಗೆ ನಿಂತುಕೊಳ್ಳಬೇಕಿತ್ತು. ಅಮಾಯಕರನ್ನು ನಿಲ್ಲಿಸಿ ಮಂಡ್ಯಕ್ಕೆ ಓಡಿ ಹೋಗಿದ್ದಾರೆ. ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ, ಏನೇನು ಹಂಚುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವೇ? ಮುನಿರತ್ನನ ಮೂಲಕ ಗೋಲ್ಡ್ ಕಾರ್ಡ್ ಮಾಡಿ ಹಂಚುತ್ತಿದ್ದಾರೆ‌. ಸಿನಿಮಾ ಸ್ಟೈಲ್ ಅಲ್ಲಿ ಮಾಡಿದ್ದಾರೆ. ಅವರೇಕೆ ಇಷ್ಟೊಂದು ಹತಾಶರಾಗಿದ್ದಾರೆ. ಹರಿಶ್ಚಂದ್ರನ ಮೊಮ್ಮಗ ಏನು ಹಂಚಿದ್ದಾನೆ" ಎಂದು ಪ್ರಶ್ನಿಸಿದರು.

ಸಂಸದರೊಬ್ಬರು ಹೆಣ್ಣುಮಕ್ಕಳ ಜೊತೆ ಅಗೌರವದಿಂದ ನಡೆದುಕೊಂಡಿರುವ ಆರೋಪದ ಕುರಿತು ಕೇಳಿದಾಗ “ಇದರ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ, ಡಾ.ಮಂಜುನಾಥ್, ರೇವಣ್ಣ ಅವರನ್ನು ಕೇಳಿ. ನಾನು ಉತ್ತರ ಕೊಡಲು ಆಗುವುದಿಲ್ಲ. ಅವರ ಆಚಾರ ವಿಚಾರ ಎಲ್ಲವೂ ಅವರೇ. ನನಗೆ ಇದನ್ನು ನೋಡಿ ಅವಮಾನವಾಗುತ್ತಿದೆ” ಎಂದರು

ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿ:

 “ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಐಟಿ ಅಧಿಕಾರಿಗಳು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಒಬ್ಬ ಬಿಜೆಪಿಯವರನ್ನು ಹಿಡಿದಿಲ್ಲ. ಐಟಿ ಅಧಿಕಾರಿಗಳಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಬ್ಲಾಕ್ ಅಧ್ಯಕ್ಷನಿಗೆ ಐಟಿ ಅಧಿಕಾರಿಯೊಬ್ಬ ಕಾಂಗ್ರೆಸ್ ಅಲ್ಲಿ ಯಾಕೆ ಇದ್ದಿಯಾ, ಬಿಜೆಪಿಗೆ ಹೋಗು ಎಂದು ಹೇಳುತ್ತಾರೆ. ಸುರೇಶ್ ಕಾರು ಚಾಲಕ ರಘು ಎಂಬಾತನ ಮಗ, ಹೆಂಡತಿಗೆ ಚಿತ್ರಹಿಂಸೆ ನೀಡಿದ್ದಾರೆ. ಎಲ್ಲರಿಗೂ ಕಿರುಕುಳ ನೀಡುತ್ತಿದ್ದು, ಏನೇನು ಕಿರುಕುಳ ನೀಡಿದರು ಎಂದು ಚುನಾವಣೆ ಮುಗಿದ ನಂತರ ಎಲ್ಲರಿಂದಲೂ ಅಫಿಡವಿಟ್ ಸಲ್ಲಿಸಲಿದ್ದೇನೆ. ಕಿರುಕುಳದ ವಿರುದ್ದ ಡಿಜಿ ಅವರನ್ನು ಭೇಟಿ ಮಾಡಿ ದೂರು ನೀಡಲಿದ್ದೇನೆ” ಎಂದರು.

ಎಲ್ಲಾ ವರ್ಗದ ಜನ ಕಾಂಗ್ರೆಸ್ ಪರ ನಿಲ್ಲುತ್ತಾರೆ:

ಕರ್ನಾಟಕದ ಜನರು ಉತ್ತಮ ತೀರ್ಪು ನೀಡಲಿದ್ದಾರೆ. ಅದರಲ್ಲೂ ಮಹಿಳೆಯರು ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲಲಿದ್ದಾರೆ. ಯುವಕರಿಗೆ, ಮಹಿಳೆಯರಿಗೆ 1 ಲಕ್ಷ ಹಣ, 25 ಲಕ್ಷ ಆರೋಗ್ಯ ವಿಮೆ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದೇವೆ. ಕಾಂಗ್ರೆಸ್ ಪಕ್ಷ ಉತ್ತಮ ಪ್ರಣಾಳಿಕೆ ನೀಡಿದೆ. ಗ್ಯಾರಂಟಿ ಮೂಲಕ ನುಡಿದಂತೆ ನಡೆದಿದ್ದೇವೆ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಯುವಕರ ಬಾಳಿನಲ್ಲಿ ಕಾಂಗ್ರೆಸ್ ಬದಲಾವಣೆ ತರಲಿದೆ. ಆದ ಕಾರಣ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಜನರು ಜವಾಬ್ದಾರಿಯಿಂದ ಮತ ಚಲಾಯಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರ ಕಷ್ಟ ನಿವಾರಣೆ ಮಾಡಿವೆ. ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗಿದೆ. ಮಹಿಳೆಯರು ಬಹಳ ಸಂತೋಷದಿಂದ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ನಾವು ಸುಮಾರು 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸೂಚನೆ ಇದೆ. ಮೊದಲ ಹಂತದ 14 ಕ್ಷೇತ್ರದಲ್ಲಿ 10 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಒಟ್ಟು 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಇದು ಜ್ಯೋತಿಷ್ಯವಲ್ಲ, ರಾಜಕೀಯ ಪಾಂಡಿತ್ಯ. ಗೌಡರ ಕುಟುಂಬ ಸೇರಿದಂತೆ 4 ಸ್ಥಾನವೂ ಬರವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News