×
Ad

ಕಲಬುರಗಿ | 25 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಶಿಕ್ಷಣ ಇಲಾಖೆಯ ಸಿಬ್ಬಂದಿ

Update: 2025-11-20 19:13 IST

ಕಲಬುರಗಿ : ನಿವೃತ್ತಿ ವೇತನ ಹಾಗೂ ಇತರೆ ಸರಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಂದ 25,000ರೂ. ಲಂಚ ಪಡೆಯುತ್ತಿದ್ದ ವೇಳೆ ಶಿಕ್ಷಣ ಇಲಾಖೆಯ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿರುವ ಘಟನೆ ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.

ಬಿಇಓ ಕಚೇರಿಯಲ್ಲಿ ಪ್ರಥಮ ದರ್ಜೆಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶಿವಲಿಂಗಪ್ಪ ಎಂಬಾತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸಿಬ್ಬಂದಿಯಾಗಿದ್ದಾರೆ.

ಯಾದಗಿರಿ ನಗರದ ನಿವಾಸಿ ಅಫ್ರೀದಿ ಅವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಆಫ್ರೀದಿ ಅವರ ತಾಯಿ ರಜಾಕ್ ಬೇಗಮ್ ಅವರ ನಿವೃತ್ತಿ ವೇತನ ಹಾಗೂ ಇತರೆ ಸರಕಾರಿ ಸೌಲಭ್ಯಗಳ ಲೆಕ್ಕಾಚಾರಗಳ ದಾಖಲೆ ಸಲ್ಲಿಸಲು ಶಿವಲಿಂಗಪ್ಪ 28,500ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಇದರಂತೆ 25,000ರೂ.ಫೋನ್ ಪೇ ಮೂಲಕ ಪಡೆಯುತ್ತಿದ್ದಾಗ ಶಿವಲಿಂಗಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.  

ಕಲಬುರಗಿ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಅರುಣಕುಮಾರ್‌ ಮುರಗುಂಡಿ ಮತ್ತಿತರ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಇದೀಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News