×
Ad

23 ವರ್ಷಗಳಿಂದ ರಮಝಾನ್ ಉಪವಾಸ ಆಚರಿಸುತ್ತಿರುವ ದುಬೈನಲ್ಲಿರುವ ವಲಸಿಗ ಸತೀಶ್ ಕುಮಾರ್

56 ವರ್ಷದ ಸತೀಶ್ ಅವರಿಗೆ ಉಪವಾಸವೆಂದರೆ ಅದೊಂದು….

Update: 2026-03-07 16:50 IST

 ಸತೀಶ್ ಕುಮಾರ್ | Photo Credit : gulfnews.com

ದುಬೈ: 2002ರಿಂದ ದುಬೈನಲ್ಲಿ ವಾಸಿಸುತ್ತಿರುವ ಸತೀಶ್ ಕುಮಾರ್ ಅವರು ಕಳೆದ 23 ವರ್ಷಗಳಿಂದ ಪವಿತ್ರ ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಿರುವ ಮೂಲಕ ಗಮನ ಸೆಳೆದಿದ್ದಾರೆ. ಯುಎಇಯಲ್ಲಿ ವಾಸಿಸುತ್ತಿರುವ ಅವಧಿಯಲ್ಲಿ ಅವರು ಪ್ರತಿವರ್ಷ ರಮಝಾನ್ ಉಪವಾಸವನ್ನು ಆಚರಿಸುತ್ತಿದ್ದಾರೆ.

ರಮಝಾನ್ ತಿಂಗಳು ಒಳ್ಳೆಯ ಕಾರ್ಯಗಳನ್ನು ಹಂಚಿಕೊಳ್ಳುವ ಮತ್ತು ಸಮುದಾಯದೊಂದಿಗೆ ಒಂದಾಗುವ ಸಮಯ ಎಂದು ಸತೀಶ್ ಕುಮಾರ್ ಅವರು ಹೇಳುತ್ತಾರೆ. ಆರಂಭದಲ್ಲಿ ತಮ್ಮ ಸುತ್ತಲಿನ ಜನರ ಸಂಪ್ರದಾಯಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ಉಪವಾಸ ಆಚರಿಸಲು ಪ್ರಾರಂಭಿಸಿದ್ದ ಅವರು, ನಂತರ ಅದು ಅವರ ಬದುಕಿನ ಅರ್ಥಪೂರ್ಣ ಅಭ್ಯಾಸವಾಗಿ ರೂಪುಗೊಂಡಿತು.

Gulf News ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಉಪವಾಸವು ಕೇವಲ ದೈಹಿಕ ಸವಾಲು ಮಾತ್ರವಲ್ಲದೆ ಆಧ್ಯಾತ್ಮಿಕ ಶುದ್ಧೀಕರಣವೂ ಆಗಿದೆ ಎಂದು ಹೇಳಿದ್ದಾರೆ. ಉಪವಾಸವು ಆಹಾರ, ಪಾನೀಯ ಹಾಗೂ ನಮ್ಮಿಂದಾಗುವ ತಪ್ಪುಗಳನ್ನು ತ್ಯಜಿಸುವ ಮೂಲಕ ಸ್ವಯಂ ಶಿಸ್ತು ಮತ್ತು ಆಧ್ಯಾತ್ಮಿಕ ಶುದ್ಧೀಕರಣವನ್ನು ಬೆಳೆಸುತ್ತದೆ. ಉಪವಾಸದಿಂದಾಗಿ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುವ ಜನರು ಎದುರಿಸುವ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

“ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸುವುದರಿಂದ ಬಡವರು ಹಾಗೂ ನಮಗಿಂತ ಕೆಳಗಿನ ವರ್ಗದ ದುಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ದಾನಶೀಲತೆ ಮತ್ತು ಸಹಾನುಭೂತಿಯ ಮನೋಭಾವ ಬೆಳೆಯುತ್ತದೆ” ಎಂದು ಅವರು ಹೇಳಿದ್ದಾರೆ.

ಇಸ್ಲಾಮಿಕ್ ಕ್ಯಾಲೆಂಡರ್ ನ ಒಂಭತ್ತನೇ ಮತ್ತು ಅತ್ಯಂತ ಪವಿತ್ರ ತಿಂಗಳು ರಮಝಾನ್ ಆಗಿದ್ದು, ಇದನ್ನು ಉದಾರತೆ ಮತ್ತು ದಯೆಯ ಕಾಲವೆಂದು ಪರಿಗಣಿಸಲಾಗುತ್ತದೆ.

56 ವರ್ಷದ ಸತೀಶ್ ಕುಮಾರ್ ಅವರ ಪ್ರಕಾರ, ಉಪವಾಸವು ದೈಹಿಕ ಹಾಗೂ ಮಾನಸಿಕವಾಗಿ ಸಹ ಕೆಲವು ಪ್ರಯೋಜನಗಳನ್ನು ನೀಡುತ್ತದೆ. “ಆಧ್ಯಾತ್ಮಿಕ ಅಂಶಗಳನ್ನು ಮೀರಿ ಉಪವಾಸವು ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ. ಮನಸ್ಸು ಹೆಚ್ಚು ಉಲ್ಲಾಸವಾಗಿಸುತ್ತದೆ. ಕೆಲಸದ ಸ್ಥಳದಲ್ಲೂ ಹೆಚ್ಚು ಕ್ರಿಯಾಶೀಲತೆಯ ಅನುಭವ ಬರುತ್ತದೆ” ಎಂದು ಅವರು ಹೇಳಿದ್ದಾರೆ.

ಸತೀಶ್ ಕುಮಾರ್ ಅವರ ಅಭಿಪ್ರಾಯದಲ್ಲಿ, ಪವಿತ್ರ ರಮಝಾನ್ ತಿಂಗಳು ಶಿಸ್ತು, ಸಹಾನುಭೂತಿ ಮತ್ತು ಆಧ್ಯಾತ್ಮಿಕ ಅವಿಷ್ಕಾರವನ್ನು ಬೆಳೆಸುವ ಕಾಲವಾಗಿದೆ. ಈ ಮೌಲ್ಯಗಳು ಎಲ್ಲರಿಗೂ ಅನ್ವಯಿಸುವಂತಿವೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News