ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜು. 25: ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸಮೂಹ 'ಎ' ಕಿರಿಯ ಶ್ರೇಣಿ ಅಧಿಕಾರಿಗಳಿಗೆ ಹಿರಿಯ ಶ್ರೇಣಿ ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿದ್ದು, ಈ ಸಂಬಂಧ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾಗಿದ್ದ ಪಿ. ಜಯಮ್ಮ ಅವರನ್ನು ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಿ.ಜಿ. ಕೃಷ್ಣ ಅವರನ್ನು ಮೈಸೂರಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಾಮನಗರ ಜಿಲ್ಲೆಯ ಶ್ರೀ ಕಬ್ಬಾಳಮ್ಮ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎಸ್. ಲಕ್ಷ್ಮೀ ನಾರಾಯಣ ಅವರನ್ನು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಪ್ರಶಾಂತ್ ಕುಮಾರ್ ಶೆಟ್ಟಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾಗಿ ನಿಯುಕ್ತಿಗೊಳಿಸಲಾಗಿದೆ.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಎಂ.ಜೆ. ರೂಪ, ಕೆಎಎಸ್ ಅವರ ಸೇವೆಯನ್ನು ಅವರ ಮೂಲ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.