×
Ad

ಉಕ್ಕು ಆಮದು ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದ ಟ್ರಂಪ್

Update: 2025-05-31 07:21 IST

PC: PTI

ವಾಷಿಂಗ್ಟನ್: ಉಕ್ಕು ಆಮದಿನ ಮೇಲಿನ ಸುಂಕವನ್ನು ಶೇಕಡ 50ಕ್ಕೆ ಹೆಚ್ಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ. ಇದರಿಂದ ಗೃಹನಿರ್ಮಾಣ, ಕಾರು ಮತ್ತು ಇತರ ಉತ್ಪನ್ನಗಳಿಗೆ ಬಳಕೆಯಾಗುವ ಉಕ್ಕು ಆಮದಿನ ಮೇಲೆ ಸುಂಕ ಭಾರಿ ಏರಿಕೆಯಾದಂತಾಗಿದೆ.

"ಅಮೆರಿಕಕ್ಕೆ ಆಮದಾಗುವ ಉಕ್ಕಿನ ಮೇಲೆ ವಿಧಿಸುತ್ತಿರುವ ಸುಂಕವನ್ನು ಶೇಕಡ 25 ರಿಂದ 50ಕ್ಕೆ ಹೆಚ್ಚಿಸುತ್ತಿದ್ದೇವೆ. ಇದು ದೇಶದ ಉಕ್ಕು ಉದ್ಯಮವನ್ನು ಮತ್ತಷ್ಟು ಸುಭದ್ರಗೊಳಿಸಲು ಕಾರಣವಾಗಲಿದೆ" ಎಂದು ಟ್ರಂಪ್ ಹೇಳಿದ್ದಾರೆ.

ಪೆನ್ಸೆಲ್ವೇನಿಯಾದ ಪಿಟ್ಸ್‍ಬರ್ಗ್ ಸಮೀಪ ಪಶ್ಚಿಮ ಮಿಫ್ಲಿನ್‍ನಲ್ಲಿ ಯುಎಸ್ ಸ್ಟೀಲ್ಸ್ ಕಂಪನಿಯ ಮಾನ್ ವ್ಯಾಲಿ ವಕ್ರ್ಸ್-ಇರ್ವಿನ್ ಪ್ಲಾಂಟ್‍ನಲ್ಲಿ ಮಾತನಾಡಿದ ಟ್ರಂಪ್ ಈ ಘೋಷಣೆ ಮಾಡಿದರು. ಜಪಾನ್‍ನ ನಿಪ್ಪಾನ್ ಸ್ಟೀಲ್ ಈ ಘಟಕದಲ್ಲಿ ಹೂಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಯುಎಸ್ ಸ್ಟೀಲ್ ಅಮೆರಿಕನ್ ಕಂಪನಿಯಾಗಿಯೇ ಉಳಿಯಲಿದ್ದು, ಜಪಾನ್ ಮೂಲದ ನಿಪ್ಪಾನ್ ಸ್ಟೀಲ್ ಇದರಲ್ಲಿ ಹೂಡಿಕೆ ಮಾಡಲಿದೆ. ಇದರ ಕೆಲ ವಿವರಗಳನ್ನು ಬಹಿರಂಗಪಡಿಸಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು.

ಈ ಕಂಪನಿ ಅಮೆರಿಕನ್ ಕಂಪನಿಯಾಗಿಯೇ ಉಳಿಯುವುದನ್ನು ಖಾತರಿಪಡಿಸುವ ಮಹತ್ವದ ಒಪ್ಪಂದವನ್ನು ಸಂಭ್ರಮಿಸಲು ನಾವು ಇಲ್ಲಿ ಸೇರಿದ್ದೇವೆ" ಎಂದು ಹೇಳಿದರು. ಸುಂಕವನ್ನು ದುಪ್ಪಟ್ಟುಗೊಳಿಸಿರುವ ಕ್ರಮದಿಂದ ಅಮೆರಿಕದ ಉಕ್ಕು ಉದ್ಯಮ ಮತ್ತಷ್ಟು ಸದೃಢವಾಗಿ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು. ಆದರೆ ಈ ದೊಡ್ಡ ಪ್ರಮಾಣದ ಸುಂಕ ಏರಿಕೆಯಿಂದ ಉಕ್ಕು ಉತ್ಪನ್ನಗಳ ಬೆಲೆ ಹೆಚ್ಚಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News