ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಒಂದಾದ ಉದ್ಧವ್-ರಾಜ್ ಠಾಕ್ರೆ!
ಉದ್ಧವ್ ಠಾಕ್ರೆ | ರಾಜ್ ಠಾಕ್ರೆ PC: PTI
ಮುಂಬೈ: ಹೊಸ ತ್ರಿಭಾಷಾ ನೀತಿ ಮೂಲಕ ಒಂದನೇ ತರಗತಿಯಿಂದಲೇ ಹಿಂದಿ ಬೋಧಿಸುವ ಮೂಲಕ ಈ ಭಾಷೆಯನ್ನು ಹೇರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಜುಲೈ 5ರಂದು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನೇತೃತ್ವದ ಪಕ್ಷಗಳು ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಂಡಿವೆ.
ರಾಜ್ ಠಾಕ್ರೆ ಎರಡು ದಶಕದ ಹಿಂದ ಶಿವಸೇನೆಯಿಂದ ಹೊರನಡೆದು ಎಂಎನ್ಎಸ್ ಪಕ್ಷ ಕಟ್ಟಿದ ಬಳಿಕ ಇಬ್ಬರು ಮುಖಂಡರು ಒಂದೇ ರಾಜಕೀಯ ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಮುಂಬರುವ ಪೌರಸಂಸ್ಥೆ ಚುನಾವಣೆಗಳಲ್ಲಿ ಈ ಸೋದರ ಸಂಬಂಧಿಗಳು ಪರಸ್ಪರ ಒಂದಾಗಲಿದ್ದಾರೆ; ಈ ಪ್ರತಿಭಟನಾ ರ್‍ಯಾಲಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೂ ಮುನ್ನ ಉದ್ಧವ್ ಹಾಗೂ ರಾಜ್ ಠಾಕ್ರೆ ಗುರುವಾರ, ಜುಲೈ 6 ಮತ್ತು ರಂದು ಎರಡು ಪ್ರತ್ಯೇಕ ಜಾಥಾ ನಡೆಸುವುದಾಗಿ ಘೋಷಿಸಿದ್ದರು.
ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರ ಪ್ರಕಾರ, ರಾಜ್ ಠಾಕ್ರೆಯವರು ಶುಕ್ರವಾರ ಈ ಬಗ್ಗೆ ಚರ್ಚೆ ನಡೆಸಿ, ಮರಾಠಿ ಭಾಷೆ ಉಳಿವಿಗಾಗಿ ಎರಡು ಪ್ರತ್ಯೇಕ ಜಾಥಾ ನಡೆಸುವುದು ಸೂಕ್ತವಲ್ಲ; ಈ ನಿಟ್ಟಿನಲ್ಲಿ ಉಭಯ ಪಕ್ಷಗಳು ಜಂಟಿ ಪ್ರತಿಭಟನೆ ನಡೆಸಿದರೆ ಪರಿಣಾಮ ದೊಡ್ಡದಾಗುತ್ತದೆ ಎಂಬ ಭಾವನೆ ನಮ್ಮದು ಎಂದು ಹೇಳಿದರು. ಈ ಬಗ್ಗೆ ಉದ್ಧವ್ ಅವರಲ್ಲಿ ಮಾತನಾಡಿದಾಗ ಯಾವುದೇ ಹಿಂಜರಿಕೆ ಇಲ್ಲದೇ ಒಪ್ಪಿಕೊಂಡರು. ಬಹುಶಃ ಗಿರ್ಗಾಮ್ ಚೌಪತ್ತಿಯಿಂದ ಆಜಾದ್ ಮೈದಾನದವರೆಗೆ ಜಾಥಾ ನಡೆಯಲಿದೆ. ಇದು ರಾಜಕೀಯೇತರವಾಗಿರುತ್ತದೆ ಹಾಗೂ ಪಕ್ಷದ ಧ್ವಜಗಳನ್ನು ಪ್ರದರ್ಶಿಸಲಾಗುವಿದಿಲ್ಲ ಎಂದು ಉಭಯ ಪಕ್ಷಗಳು ಸ್ಪಷ್ಟಪಡಿಸಿವೆ.
ಎಂಎನ್ಎಸ್ ಪದಾಧಿಕಾರಿ ಸಂದೀಪ್ ದೇಶಪಾಂಡೆ ಮತ್ತು ಶಿವಸೇನೆ (ಯುಬಿಟಿ) ಶಾಸಕ ವರುಣ್ ಸರ್‌ದೇಸಾಯಿ ಶುಕ್ರವಾರ ದಾದರ್‌ನಲ್ಲಿ ಪರಸ್ಪರ ಭೇಟಿ ಮಾಡಿರುವುದು, ಈ ಪಕ್ಷಗಳು ಕೇವಲ ಪ್ರತಿಭಟನೆಗೆ ಒಂದಾಗುತ್ತಿಲ್ಲ; ಬಿಎಂಸಿ ಚುನಾವಣೆಗೆ ಕೂಡಾ ಒಂದಾಗುತ್ತಿವೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.