ಯುವಜನತೆ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು: ವಲಿ ರಹ್ಮಾನಿ
ಉಡುಪಿ, ಆ.12: ಯುವಜನತೆ ತಮ್ಮ ಮಾನಸಿಕ, ಬೌದ್ಧಿಕ, ನೈತಿಕ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಬೆಳೆಸಿ ಕೊಳ್ಳಬೇಕು. ಆ ಮೂಲಕ ಶಿಸ್ತಿನ, ಕೌಶಲ್ಯ ಸಂಪನ್ನ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪು ಗೊಳ್ಳಬೇಕು. ತಮ್ಮ ಸಮಯವನ್ನು ವ್ಯರ್ಥ ಮಾಡದೇ, ಕಿಶೋರ ವಯಸ್ಸನ್ನು ಸುರಕ್ಷಿತ ಮತ್ತು ಫಲಪ್ರದವಾಗಿ ಬಳಸಿಕೊಳ್ಳಬೇಕು ಎಂದು ಯುವ ನಾಯಕ ಹಾಗೂ ಸಮಾಜ ಸೇವಕ ವಲಿ ರಹ್ಮಾನಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ರವಿವಾರ ಉಡುಪಿ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಪೋಷಕರು ತಮ್ಮ ಮಕ್ಕಳ ದೈಹಿಕ, ಬೌದ್ಧಿಕ, ನೈತಿಕ ಮತ್ತು ಧಾರ್ಮಿಕ ಹಿತವನ್ನು ಪ್ರಾಮುಖ್ಯತೆಯಿಂದ ನೋಡಿ ಕೊಳ್ಳಬೇಕು. ಮನೆ ಒಂದು ಶಾಲೆಯಾಗಬೇಕು ಮತ್ತು ಪೋಷಕರು ಗುರುಗಳಾಗಬೇಕು. ಮಕ್ಕಳ ಮೊದಲ ಪಾಠ ಮನೆಯಲ್ಲಿಯೇ ಪ್ರಾರಂಭವಾಗಬೇಕು ಎಂದರು. ವಲಿ ರಹ್ಮಾನಿ ತಮ್ಮ ಭಾಷಣವನ್ನು ಪ್ರಶ್ನೋತ್ತರ, ಪಿಪಿಟಿ ಪ್ರದರ್ಶನ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ನಿರ್ವಹಿಸಿದರು.
ಒಕ್ಕೂಟದ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮೊಹಮ್ಮದ್ ಮೌಲಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶೇಖ್ ಅಬ್ದುಲ್ ಲತೀಫ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತಾಲೂಕು ಅಧ್ಯಕ್ಷ ಇರ್ಷಾದ್ ನೇಜಾರ್ ವಂದಿಸಿದರು. ದಿನಪೂರ್ತಿ ಈ ಕಾರ್ಯಕ್ರಮದಲ್ಲಿ ಸುಮಾರು 350 ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಭಾಗವಹಿಸಿದ್ದರು.