×
Ad

ಬೈಂದೂರು, ಹೆಬ್ರಿಗಳಲ್ಲಿ ಧಾರಾಕಾರ ಮಳೆ

Update: 2025-08-18 19:58 IST

ಉಡುಪಿ, ಆ.18: ಆಂಧ್ರ ಪ್ರದೇಶದ ಉತ್ತರ ಹಾಗೂ ಒರಿಸ್ಸಾದ ದಕ್ಷಿಣ ಭಾಗದ ಬಂಗಾಳಕೊಲ್ಲಿಯಲ್ಲಿ ಉಂಟಾ ಗಿರುವ ವಾಯುಭಾರ ಕುಸಿತದಿಂದ ಚಂಡಮಾರುತದ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಲಕ್ಷದ್ವೀಪ, ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಕಂಡುಬಂದಿರುವ ಭಾರೀ ಗಾಳಿ-ಮಳೆಯ ಸಾಧ್ಯತೆ ಆ.20ರವರೆಗೆ ಮುಂದುವರಿಯುವ ಮುನ್ಸೂಚನೆಯನ್ನು ತಿರುವನಂತಪುರದ ಹವಾಮಾನ ಕೇಂದ್ರ ನೀಡಿದೆ.

ಈ ಅವಧಿಯಲ್ಲಿ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 45ರಿಂದ 55 ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರ ಪ್ರಕ್ಷುಬ್ಧವಾಗಿ ರಲಿದ್ದು, ಮೀನುಗಾರರು ಕಡಲಿಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆ.20ರವರೆಗೆ ಮಜಲಿಯಿಂದ ಭಟ್ಕಳದವರೆಗೆ ಅರಬಿಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, 3ರಿಂದ 3.2ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಸಮುದ್ರ ತೀರಕ್ಕೆ ಯಾರೂ ತೆರಳದಂತೆ ಮುನ್ಸೂಚನೆಯಲ್ಲಿ ಸೂಚಿಸಲಾಗಿದೆ.ರಾಜ್ಯ ಕರಾವಳಿಯ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ ಭಟ್ಕಳ, ಗಂಗೊಳ್ಳಿ, ಮಲ್ಪೆ ಬಂದರುಗಳಲ್ಲಿ ಸ್ಥಳೀಯ ಎಚ್ಚರಿಕೆ ಸೂಚನೆಯಾದ ಮೂರನ್ನು ಹಾರಿಸುವಂತೆ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಭಾರೀ ಮಳೆ: ಇದರ ಪರಿಣಾಮವಾಗಿ ಉಡುಪಿ ಜಿಲ್ಲೆಯಾ ದ್ಯಂತ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯ ಬೈಂದೂರು ಹಾಗೂ ಹೆಬ್ರಿ ತಾಲೂಕಿ ನಾದ್ಯಂತ ಧಾರಾಕಾರ ಮಳೆ ಸುರಿದಿದೆ. ಬೈಂದೂರಿನಲ್ಲಿ 12.2ಮಿ ಮಳೆಯಾದರೆ, ಹೆಬ್ರಿಯಲ್ಲಿ 11.9ಸೆ.ಮೀ. ಮಳೆ ಬಿದ್ದ ವರದಿಗಳು ಬಂದಿವೆ.

ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 86ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 96.9ಮಿ.ಮೀ., ಕಾರ್ಕಳದಲ್ಲಿ 65.1, ಬ್ರಹ್ಮಾವರದಲ್ಲಿ 59.4 ಹಾಗೂ ಉಡುಪಿಯಲ್ಲಿ 56.9ಮಿ.ಮೀ. ಮಳೆ ಬಿದ್ದಿದೆ.

ಕೊಟ್ಟಿಗೆಗೆ ಹಾನಿ: ಸತತ ಗಾಳಿ-ಮಳೆಯಿಂದಾಗಿ ಕುಂದಾಪುರ ತಾಲೂಕು ಆಲೂರು ಗ್ರಾಮದ ಶೇಷಗಿರಿ ಆಚಾರ್ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಹಾನಿಯಾಗಿದ್ದು, 30ಸಾವಿರ ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.

ಅದೇ ರೀತಿ ಕುಂದಾಪುರ ಕಸಬಾದ ಗೋವಿಂದ ಎಂಬವರ ಮನೆಯ ಮೇಲೆ ಮರ ಬಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ 25ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿರುವುದಾಗಿ ತಿಳಿದುಬಂದಿದೆ.

ಶಾಲೆಗಳಿಗೆ ರಜೆ: ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ಎರಡು ದಿನಗಳ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಸೋಮವಾರ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News