ಮಜೂರು ಗ್ರಾಮಸಭೆಯಲ್ಲಿ ನಿರ್ವಸಿತ ಕುಟುಂಬಗಳಿಗೆ ಭಾವಾನಾತ್ಮಕ ಬೀಳ್ಕೊಡುಗೆ
ಕಾಪು, ಸೆ.12: ಮಜೂರು ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಶುಕ್ರವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷತೆಯಲ್ಲಿ ಮಜೂರು ಗ್ರಾಪಂ ಸಭಾಭವನದಲ್ಲಿ ನಡೆಯಿತು.
ನೂರಾರು ವರ್ಷಗಳಿಂದ ತನ್ನ ಪೂರ್ವಜರೊಂದಿಗೆ ಹುಟ್ಟಿ ಬೆಳೆದು ಜೀವನ ಸಾಗಿಸುತ್ತಿದ್ದ ಪಾದೂರು ಗ್ರಾಮದ ಸುಮಾರು 50 ಕುಟುಂಬ ಇದೀಗ ಐಎಸ್‌ಪಿಆರ್‌ಐ 2ನೇ ಹಂತದ ಯೋಜನೆಗಾಗಿ ಗ್ರಾಮವನ್ನು ತ್ಯಜಿಸಿ ಬೇರೆ ಕಡೆ ಹೋಗಬೇಕಾಗಿದ್ದು, ಈ ನಿರ್ವಸಿತ ಕುಟುಂಬದವರಿಗೆ ಗ್ರಾಪಂನಿಂದ ಭಾವಾನಾತ್ಮಕ ಬೀಳ್ಕೊಡಲಾಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಕಾಪು ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಸುಗುಣ ಗ್ರಾಮ ಸಭೆಯ ಮಹತ್ವದ ಬಗ್ಗೆ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪೋಲಿಸ್ ಇಲಾಖೆ, ಮಹಾತ್ಮಾ ಗಾಂಧಿ ನರೇಗಾ ಯೋಜನೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ, ನವಿಲು ಮಂಗಗಳ ಹಾವಳಿ ಬಗ್ಗೆ, 92 ಹೇರೂರು ಗ್ರಾಮದ ಪ್ಲಾಟಿಂಗ್ ಸಮಸ್ಯೆ ಬಗ್ಗೆ, ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ನಡೆಸದಂತೆ ಸಭೆಯಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಯಿತು.
ಗ್ರಾಮಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಪಶು ವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ, ವರ್ಗಾವಣೆಗೊಂಡಿರುವ ಬಗ್ಗೆ ಮತ್ತು ಪಾದೂರು ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ 46 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಲಕ್ಷಣ್ ಶೆಟ್ಟಿಗಾರ್, ಕರಂದಾಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕುಸುಮ, ಚಂದ್ರನಗರ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 27 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪ , ಮಜೂರು ಗ್ರಾಪಂ ಅಧಿಕೃತ ವೆಬ್‌ಸೈಟ್ ರಚಿಸಿದ ಅರುಣ್ ಶೆಟ್ಟಿ ಅಂಡೆಮಾರುಗುತ್ತು ಪಾದೂರು ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಗ್ರಾಪಂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ವಿವಿಧ ಇಲಾಖಾಧಿಕಾರಿ ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ, ಸಂಜೀವಿನಿ ಸಂಘದ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯದರ್ಶಿ ಪ್ರಸಾದ್ ಭಂಡಾರಿ ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು. ಆಶಾ ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.