×
Ad

ಮಲ್ಪೆ ಬೀಚ್‌ನಲ್ಲಿ ಅಂ.ರಾ.ಕರಾವಳಿ ಸ್ವಚ್ಚತಾ ದಿನಾಚರಣೆ

Update: 2025-09-20 21:54 IST

ಉಡುಪಿ, ಸೆ.20: ವಿಶ್ವದಾದ್ಯಂತ ಸೆ.20ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನವನ್ನು ಮಲ್ಪೆ ಕಡಲಕಿನಾರೆ ಸೇರಿದಂತೆ ಉಡುಪಿ ಜಿಲ್ಲೆಯ ವಿವಿಧ ಬೀಚ್‌ಗಳಲ್ಲಿ ಇಂದು ಆಚರಿಸಲಾಯಿತು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಮಾಹೆ ವಿಶ್ವವಿದ್ಯಾಲಯ, ಕೆನರಾ ಬ್ಯಾಂಕ್, ಕರಾವಳಿ ಕಾವಲು ಪಡೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಡುಪಿ ಕರಾವಳಿಯ ಪ್ರಮುಖ ಸಮುದ್ರ ತೀರ ಪ್ರದೇಶಗಳಾದ ಮಲ್ಪೆ ಬೀಚ್, ಕಾಪು ಬ್ಲೂ ಫ್ಲಾಗ್ ಬೀಚ್, ಡೆಲ್ಟಾ ಬೀಚ್, ಕೋಡಿ, ತ್ರಾಸಿ-ಮರವಂತೆ, ಬೈಂದೂರಿನ ಸೋಮೇಶ್ವರ ಬೀಚ್ ಮುಂತಾದ ಕಡಲ ಕಿನಾರೆಯಲ್ಲಿ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಲ್ಪೆ ಕಡಲತೀರದಲ್ಲಿ ಜಿಲ್ಲೆಯ ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರೊಂದಿಗೆ ಸೇರಿ ತಾವೇ ಕಸ ಸಂಗ್ರಹಿಸುವ ಮೂಲಕ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪರಿಸರ ಜಾಗೃತೆಯುಳ್ಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ, ಪ್ಲಾಸ್ಟಿಕ್ ಬಳಸದಂತೇ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಬೇಕು. ನಮ್ಮ ಸುತ್ತಮುತ್ತ ಪರಿಸರ ಸ್ವಚ್ಚವಾಗಿದ್ದಲ್ಲಿ ಮಾತ್ರ ನಾವುಗಳು ಉತ್ತಮ ಆರೋಗ್ಯ ಹೊಂದಲು ಸಾಧ್ಯ, ಇದಕ್ಕೆ ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಇಲಾಖೆಗಳ ಅಧಿಕಾರಿಗಳು, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಗಂಗಾಧರ್, ಮಾಹೆಯ ವಿದ್ಯಾರ್ಥಿಗಳು, ನಗರಸಭಾ ಸ್ವಚ್ಚತಾಕರ್ಮಿಗಳು, ಕೆನರಾ ಬ್ಯಾಂಕ್ ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


 






 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News