ಸಮಾಜಮುಖಿ ಕಾರ್ಯಗಳೇ ರಂಗಭೂಮಿ ಶಕ್ತಿ: ಎಚ್.ಎಸ್.ಬಲ್ಲಾಳ್
ಉಡುಪಿ, ಸೆ.22: ರಂಗಭೂಮಿಯ ರಂಗ ಶಿಕ್ಷಣವು ಉಡುಪಿಯ ಮಕ್ಕಳಲ್ಲಿ ರಂಗಾಸಕ್ತಿಯನ್ನು ಹಾಗೂ ವ್ಯಕ್ತಿತ್ವದ ಬಹುಮುಖ ವಿಕಸನಕ್ಕೆ ಸಹಕಾರಿಯಾಗಿದೆ. ಈ ವರ್ಷ 25 ಪ್ರೌಢಶಾಲೆಗಳಲ್ಲಿ ರಂಗ ಶಿಕ್ಷಣವನ್ನು ನೀಡುತ್ತಿದೆ. ನಿರಂತರವಾದ ಸಮಾಜಮುಖಿ ರಂಗ ಚಟುವಟಿಕೆಗಳು ರಂಗಭೂಮಿ ಸಂಸ್ಥೆಯನ್ನು ಉಳಿಸಿ ಬೆಳೆಸಿದೆ ಎಂದು ರಂಗಭೂಮಿ ಉಡುಪಿ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.
ಉಡುಪಿಯ ಹೋಟೆಲ್ ಡಯಾನದಲ್ಲಿ ಸೆ.20ರಂದು ನಡೆದ ರಂಗಭೂಮಿಯ ಸಂಸ್ಥೆಯ 60ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಭೋಜ ಯು. ಲೆಕ್ಕಪತ್ರಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಾಧನೆಗಳ ಮೂಲಕ ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ರಂಗಭೂಮಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.