ಬೈಂದೂರು ಪ.ಪಂ.ನಿಂದ ಗ್ರಾಮೀಣ ಪ್ರದೇಶ ಕೈಬಿಡಲು ಆಗ್ರಹ: ಅನಿರ್ಧಿಷ್ಟಾವಧಿ ಧರಣಿ ಆರಂಭ
ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್‌ನಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಬೈಂದೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ಉದ್ಯಮಿ ನಿತಿನ್ ನಾರಾಯಣ ತಳಿರು ಕಟ್ಟುವ ಮೂಲಕ ಧರಣಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೈಂದೂರಿನ ಹಳ್ಳಿಗಳ ಪಾಲಿಗೆ ಪಟ್ಟಣ ಪಂಚಾಯತ್ ನಿರ್ಧಾರ ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಿದೆ. ಅರಣ್ಯ ಪ್ರದೇಶಗಳನ್ನು ಸೇರಿಸಿ ಅವೈಜ್ಞಾನಿಕ ವಿಂಗಡನೆ ಮಾಡಿದ್ದು ಜನಪ್ರತಿನಿಧಿಗಳು ಸ್ವಲ್ಪ ಪ್ರಾಮಾಣಿಕವಾಗಿ ಗಮನಹರಿಸಿದರೆ ಪರಿಹಾರ ಸಾಧ್ಯ ಎಂದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಮಾತನಾಡಿ, ಈಗಾಗಲೆ ಬೈಂದೂರು ಮತ್ತು ಉಡುಪಿಯಲ್ಲಿ ನಮ್ಮ ಆಗ್ರಹ ಈಡೇರಿಸುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದು ಸರಕಾರದ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ನ್ಯಾಯ ಸಿಗುವವರಗೆ ಹೋರಾಟ ಮುಂದುವರಿಯಲಿದೆ. ಎಲ್ಲಾ ಭಾಗದ ರೈತ ಮುಖಂಡರು ನಾಯಕರು ಸಾರ್ವಜನಿಕರು ಬೆಂಬಲ ಸೂಚಿಸಿದ್ದು ಪ್ರತಿದಿನ ಒಂದೊಂದು ಭಾಗದ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.
ಧರಣಿಯಲ್ಲಿ ಹೊಸೂರು ಭಾಗದ ನೂರಾರು ಸಾರ್ವಜನಿಕರು ಹಾಗೂ ನಾಗಪ್ಪ ಮರಾಠಿ ಉಪಸ್ಥಿತರಿದ್ದರು.