×
Ad

ಉಡುಪಿ ಅಜ್ಜರಕಾಡಿನಲ್ಲಿ ಗಾಂಧಿ ಪುತ್ಥಳಿ ಪ್ರತಿಷ್ಠಾಪನೆ: ಯಶಪಾಲ್ ಸುವರ್ಣ

Update: 2025-10-02 19:17 IST

ಉಡುಪಿ, ಅ.2:ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ದೇಶಾದ್ಯಂತ ಸಂಚರಿಸುತ್ತಿದ್ದಾಗ 1934ರಲ್ಲಿ ಉಡುಪಿಗೂ ಭೇಟಿ ನೀಡಿ ಅಜ್ಜರಕಾಡಿನಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸ್ಥಳದಲ್ಲಿ ಗಾಂಧೀಜಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಗಾಂಧೀಜಿ ಭೇಟಿಯ ಸವಿನೆನಪನ್ನು ಚಿರಸ್ಥಾಯಿಗೊಳಿಸಲಾಗುವುದು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.

ಜಿಲ್ಲಾಡಳಿತ, ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಅಜ್ಜರಕಾಡು ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ ಇಂದು ಮುಂಜಾನೆ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮಾದರಿ ಎನಿಸಿರುವ ಉಡುಪಿ ಜಿಲ್ಲೆಗೂ ಗಾಂಧೀಜಿಗೂ ಗಾಢವಾದ ನಂಟಿದೆ. ಅವರ ಪುತ್ಥಳಿಯನ್ನು ಇಲ್ಲಿ ಪ್ರತಿಷ್ಠಾಪಿಸಿ ಅವರ ಆದರ್ಶಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದವರು ಹೇಳಿದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಗಾಂಧೀ ಆಶಯ ದಂತೆ ನಾವೆಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪೌರ ಕಾರ್ಮಿಕರಿಗೆ ಸಾರ್ವಜನಿಕರು ತಮ್ಮ ಮನೆಯ ಹಸಿ ಕಸ ಮತ್ತು ಒಣಗಿದ ಕಸವನ್ನು ವಿಂಗಡಣೆ ಮಾಡಿ ನೀಡಬೇಕು. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಯಾಗಿದ್ದು ಇದರಿಂದ ಕಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯ. ಒಂದೊಮ್ಮೆ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ ಮಹಾತ್ಮಾ ಗಾಂಧಿ ರಾಷ್ಟ್ರಪಿತ ರೆಂದು ಮಾನ್ಯರಾದರೆ, ಲಾಲ್‌ ಬಹಾದ್ದೂರ್ ಶಾಸ್ತ್ರಿಗಳು ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ದೇಶಕ್ಕೆ ನೀಡಿದವರು. ಮೌಲಿಕ ಜೀವನವನ್ನು ನಡೆಸಿ ವಿಶ್ವಕ್ಕೆ ಮಾದರಿಯಾದ ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢ ಶಾಲಾ ವಿಭಾಗ, ಪದವಿ ಪೂರ್ವ ವಿಭಾಗ ಹಾಗೂ ಪದವಿ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಬಿ., ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಮಣಿಪಾಲ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News