×
Ad

ಕಲಾವಿದರಿಗೆ ಎಐ ಸವಾಲು: ಎಡಿಸಿ ಅಬೀದ್ ಗದ್ಯಾಳ

Update: 2025-10-02 19:19 IST

ಉಡುಪಿ, ಅ.2: ನಮ್ಮ ಇಂದಿನ ಕಲಾವಿದರಿಗೆ ಸಮಾಜದ ಜನರ ಜೊತೆ ಜೊತೆಗೆ ಆಧುನಿಕ ಕೃತಕ ಬುದ್ಧಿಮತ್ತೆ (ಎಐ)ಯ ಸವಾಲನ್ನು ಎದುರಿಸುವ ಹೊಸ ಪರೀಕ್ಷೆ ಎದುರಾಗಿದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.

ನಗರದ ಕುಂಜಿಬೆಟ್ಟುನಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರ ಕಲಾವಿದ ಲಿಯಾಕತ್ ಅಲಿ ಅವರ ಇತ್ತೀಚಿನ ಅರೇಬಿಕ್ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸ್ವಯಂಸ್ಪೂರ್ತಿಯಿಂದ, ಸ್ವಸಂತೋಷದಿಂದ ಮಾಡುವ ಕೆಲಸ ಯಾವತ್ತೂ ಭಾರವಾಗದು. ಸರಿಯಾದ ನೀರು, ಗೊಬ್ಬರ, ಬೆಳಕು, ಗಾಳಿಯಿಂದ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಫಲ ನೀಡುವಂತೆ ಮಕ್ಕಳಲ್ಲಿರುವ ಕಲೆಯ ಪ್ರತಿಭೆ, ಸಾಮರ್ಥ್ಯ ಅಭಿವ್ಯಕ್ತಿಗೆ ಅವಕಾಶ, ಪೋಷಣೆ ಅಗತ್ಯ ಎಂದು ಅವರು ಪೋಷಕರಿಗೆ ಕಿವಿಮಾತು ಹೇಳಿದರು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್.ಕೆ. ಗಂಗಾಧರ, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಕ್ ವಾಹಿದ್ ದಾವೂದ್, ಉದ್ಯಮಿ ಯ.ವಿಶ್ವನಾಥ್ ಶೆಣೈ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರಿನ ಮೊಹಮ್ಮದ್ ಸಹಿನ್, ಇಂದ್ರಾಳಿ ಮಸೀದಿಯ ಖಾಸ್ಮಿ ಮೌಲಾನಾ ಮಸಿಯುಲ್ಲಾ ಖಾನ್, ಇನಾಯತ್ ಆರ್ಟ್ ಗ್ಯಾಲರಿಯ ಲಿಯಾಕತ್ ಅಲಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲ್ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

ಚಿತ್ರಕಲಾ ಪ್ರದರ್ಶನ ಅ.6ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆ ಯವರೆಗೆ ಸಾರ್ವಜನಿಕರ ತೆರೆದಿರುತ್ತದೆ. ಅ.6ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಪ್ರದರ್ಶನದಲ್ಲಿ ಲಿಯಾಕತ್ ಅಲಿ ಅವರ 30 ಅರೇಬಿಕ್ ಕ್ಯಾಲಿಗ್ರಫಿ ಹಾಗೂ ಗಾಂಧೀಜಿಯವರ 20 ವರ್ಣಚಿತ್ರಗಳು ಪ್ರದರ್ಶನಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News