ಪ್ರವಾದಿ ಪ್ರೇಮ ನಮ್ಮ ಬದುಕಿನಲ್ಲಿ ಪ್ರತಿಫಲಿಸಬೇಕು: ರಫೀಉದ್ದೀನ್ ಕುದ್ರೋಳಿ
ಮಂಗಳೂರು, ಅ.4: ಸುಮಾರು 700 ವರ್ಷಗಳಿಗಿಂತಲೂ ಅಧಿಕ ಕಾಲ ಭಾರತವನ್ನಾಳಿ ಈ ದೇಶಕ್ಕೆ ಸಾಂಸ್ಕೃತಿಕ ಮತ್ತು ಭೌಗೋಳಿಕ ಕೊಡುಗೆಗಳನ್ನು ನೀಡಿದ ಮುಸ್ಲಿಮ್ ಸಮುದಾಯ ಇಂದು ರಾಜಕೀಯವಾಗಿ, ಸಾಮಾಜಿಕವಾಗಿ ಕೆಳಮಟ್ಟಕ್ಕೆ ಸರಿಸಲ್ಪಟ್ಟಿರುವುದು ವಿಷಾದನೀಯ. ಇಸ್ಲಾಮಿನ ನೈಜ ಆದರ್ಶಗಳ ಪಾಲನೆ ಮಾಡಿದರೆ ಹಾಗೂ ಇಸ್ಲಾಮಿನ ಬಗ್ಗೆ ಇರುವ ಅಪಕಲ್ಪನೆಗಳನ್ನು ದೂರೀಕರಿಸಿದರೆ ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಿದೆ. ಪ್ರವಾದಿ ಪ್ರೇಮವನ್ನು ಸಾರಿ ಹೇಳುವ ಮೊದಲು ಪ್ರವಾದಿ ಪ್ರೇಮ ನಮ್ಮ ಬದುಕಲ್ಲಿ ಪ್ರತಿಫಲಿಸಬೇಕು ಎಂದು ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದರು.
ಯುನಿವೆಫ್ ಕರ್ನಾಟಕವು ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಅಂಗವಾಗಿ ಬೆಂಗರೆ ಕಸಬಾದ ಅನಸ್ ಬಿನ್ ಮಾಲಿಕ್ ಮಸೀದಿಯ ಮುಂಭಾಗದಲ್ಲಿ ಶುಕ್ರವಾರ ನಡೆದ ಸೀರತ್ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಸದಸ್ಯ ಅಬ್ದುರ‌್ರಶೀದ್ ಕುದ್ರೋಳಿ ಉಪಸ್ಥಿತರಿದ್ದರು. ಅಭಿಯಾನ ಸಂಚಾಲಕ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಸೈಫುದ್ದೀನ್ ಕಿರಾಅತ್ ಪಠಿಸಿದರು. ಸಹ ಸಂಚಾಲಕ ಮುಹಮ್ಮದ್ ಆಸಿಫ್ ಕಾರ್ಯಕ್ರಮ ನಿರೂಪಿಸಿದರು.