ಕುಂದಾಪುರ: ಅಮಾಯಕ ಜೀವಗಳನ್ನು ಪಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ!
ಕುಂದಾಪುರ, ಅ.15: ಸುರತ್ಕಲ್-ಕುಂದಾಪುರ ಹಾಗೂ ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ಬಸ್ ಬೇ ಇಲ್ಲದೆ ಬಸ್‌ಗಳು ರಸ್ತೆ ಮಧ್ಯೆಯೇ ನಿಲ್ಲಿಸುವ ಕಾರಣ ಹಲವಷ್ಟು ಅಪಘಾತಗಳು ಸಂಭವಿಸಿ ಜೀವ ಹಾನಿಗಳು ಸಂಭವಿಸುತ್ತಿವೆ. ಟೋಲ್ ಪಡೆಯುವ ಸಂಸ್ಥೆಯು ಹೆದ್ದಾರಿ ನಿರ್ವಹಣೆ, ಸರ್ವೀಸ್ ರಸ್ತೆ ನಿರ್ಮಾಣದ ಜೊತೆಗೆ ಅಗತ್ಯ ಸ್ಥಳಗಳಲ್ಲಿ ಬಸ್ ಬೇ ನಿರ್ಮಿಸಬೇಕೆಂಬ ಒತ್ತಾಯ ಈಗ ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದೆ.
ಹೆದ್ದಾರಿಯಲ್ಲಿ ಹಲವೆಡೆ ಬಸ್ ನಿಲ್ದಾಣಗಳಿಲ್ಲ. ಹಲವೆಡೆ ಇನ್ನು ಪ್ರತ್ಯೇಕ ಸರ್ವಿಸ್ ರಸ್ತೆಯಿಲ್ಲ. ಪ್ರಯಾಣಿಕರನ್ನು ಹತ್ತಿ ಇಳಿಸಲು ಬಸ್ ಬೇ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯಲ್ಲೇ ಬಸ್‌ಗಳು ನಿಲ್ಲುತ್ತಿವೆ. ಬಸ್‌ಗಳು ಏಕಾಏಕಿ ಯಾಗಿ ನಿಲ್ಲುವುದರಿಂದ ಹಿಂದಿನಿಂದ ಬರುವ ಇತರೆ ವಾಹನ ಸವಾರರಿಗೆ ಗೊಂದಲವುಂಟಾಗುತ್ತಿದೆ. ಯೂ ಟರ್ನ್, ಡಿವೈಡರ್ ಮೊದಲಾದೆಡೆ ಅಪಾಯಕಾರಿಯಾಗಿ ವಾಹನ ತಿರುಗಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆ.
ಇನ್ನು ಮಂಗಳೂರಿನಿಂದ ಬೈಂದೂರಿನ ತನಕ ಅನೇಕ ಕಡೆ ಬಸ್‌ಗಳು ಸರ್ವಿಸ್ ರೋಡ್ ಮುಖಾಂತರ ಬಸ್‌ನಿಲ್ದಾಣಕ್ಕೆ ಬಂದು ನಿಲ್ಲುತ್ತವೆ. ಆದರೆ ಕೋಟ, ಕೋಟ ಮೂರುಕೈ, ತೆಕ್ಕಟ್ಟೆ, ತಲ್ಲೂರು, ಹೆಮ್ಮಾಡಿ, ತಲ್ಲೂರಿನಲ್ಲಿ ಹೆದ್ದಾರಿಯಲ್ಲಿಯೇ ಬಸ್‌ಗಳನ್ನು ನಿಲ್ಲಿಸಲಾಗುತ್ತದೆ. ಕುಂದಾಪುರದ ಬಸ್ರೂರು ಮೂರುಕೈ, ಹಂಗಳೂರು, ಕೋಟೇಶ್ವರ ದಲ್ಲಿ ಸರ್ವೀಸ್ ರಸ್ತೆ ಮೇಲೆ ಬಸ್ ನಿಲ್ಲಿಸಿ ಇತರರಿಗೆ ಸಮಸ್ಯೆ ಉಂಟುಮಾಡಲಾಗುತ್ತಿದೆ. ಈ ಎಲ್ಲಾ ಸ್ಥಳಗಳಲ್ಲಿ ಬಸ್ ಬೇ ಆಗಬೇಕಿದೆ.
ಹೆದ್ದಾರಿ ಮೇಲೆ ಬಸ್- ಬೈಕ್ ಸವಾರನ ಮೇಲೆ ಹರಿದ ಕ್ರೇನ್
ಮೂರ್ನಾಲ್ಕು ದಿನಗಳ ಹಿಂದೆ ತೆಕ್ಕಟ್ಟೆಯ ಡಿವೈಡರ್ ಸಮೀಪದಲ್ಲಿ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ನಿಲ್ಲಿಸಿದ್ದು, ಈ ವೇಳೆ ಡಿವೈಡರ್ ನಲ್ಲಿ ಯೂಟರ್ನ್ ತೆಗೆದುಕೊಳ್ಳುತಿದ್ದ ಬೈಕ್‌ಗೆ ಉಡುಪಿ ಕಡೆಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ದ್ವಿಚಕ್ರ ವಾಹನ ಸವಾರ ಮಣೂರು ಮೂಲದ ಅಭಿಷೇಕ್ ಪೂಜಾರಿ (24) ಎಂಬ ಯುವಕನ ಮೇಲೆ ಹಿಂಬದಿಯಿಂದ ಬಂದ ಕ್ರೇನ್ ಹತ್ತಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಯುವಕ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾನೆ.
ಈ ದುರಂತದ ವಿಡಿಯೊ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು ವೈರಲ್ ಆಗಿದೆ. ಬಸ್ ಚಾಲಕ ಬಸ್‌ನ್ನು ಯೂಟರ್ನ್ ತಿರುವಿನಲ್ಲೇ ನಿಲ್ಲಿಸಿದ್ದು, ಕ್ರೇನ್‌ನ ನಿಯಂತ್ರಣವಿಲ್ಲದ ಸಂಚಾರವೇ ಯುವಕನ ಸಾವಿಗೆ ಕಾರಣ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.