ದಸಂಸ ಮುಖಂಡ ಶೇಖರ್ ಹಾವಂಜೆಗೆ ಜೀವಬೆದರಿಕೆ: ಪ್ರಕರಣ ದಾಖಲು
ಬ್ರಹ್ಮಾವರ, ಅ.25: ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ(52) ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆಯ ಮುಖ್ಯ ಪೇಟೆಯ ಅಯ್ಯಪ್ಪ ಮಂದಿರದ ಹಿಂದೆ ಸರಕಾರದ/ಬಂದರು ಇಲಾಖೆಯ ಭೂಮಿಯಲ್ಲಿ ಅಕ್ರಮ ವಾಗಿ ಇಲಾಖೆಯ ಅನುಮತಿ ಇಲ್ಲದೆ ಸಂಬಂಧಿಸಿದ ಇತರೆ ಇಲಾಖೆಗಳ ನಿರಕ್ಷೇಪಣಾ ದೃಢಪತ್ರ ಇಲ್ಲದೆ, ಕಟ್ಟಡ ಪರವಾನಗಿಯು ಪಡೆಯದೆ 2 ಅಂತಸ್ತಿನ ಬೃಹತ್ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ಶೇಖರ್ ಹಾವಂಜೆ ನೇತೃತ್ವದಲ್ಲಿ ಅ.1ರಂದು ಬಂದರು ಉಪ ಸಂರಕ್ಷಣಾಧಿಕಾರಿಯವರಿಗೆ ಲಿಖಿತವಾಗಿ ದೂರು ನೀಡಲಾಗಿತ್ತು.
ಈ ಬಗ್ಗೆ 15 ದಿನ ಕಳೆದರೂ ಬಂದರು ಸಂರಕ್ಷಣಾಧಿಕಾರಿ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಇದ್ದ ಕಾರಣ, ಅವರು ಅ.17ರಂದು ಲೋಕಾಯುಕ್ತ, ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಉಡುಪಿ ಜಿಲ್ಲಾಧಿಕಾರಿಗಳಿಗೆ, ನಿರ್ದೇಶಕರು ಬಂದರು ಇಲಾಖೆ ಬೆಂಗಳೂರು ರವರಿಗೆ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆ ಗಳಿಗೆ ಸಂಘಟನೆಯ ವತಿಯಿಂದ ಲಿಖಿತವಾಗಿ ದೂರು ನೀಡಿದ್ದರು.
ಆ ದೂರಿನ ವಿಚಾರವಾಗಿ ಶೇಖರ್ ಹಾವಂಜೆ ಅವರ ಮೊಬೈಲ್‌ಗೆ ಸಂದೀಪ ಮಲ್ಪೆ ಮತ್ತು ಕೃಷ್ಣ ಶ್ರೀಯಾನ್ ಮಲ್ಪೆ ಎಂಬವರು ಅ.23ರಂದು ಸಂಜೆ ಕರೆ ಮಾಡಿ ಅವಾಚ್ಯವಾಗಿ ಬೈದು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.