ಬೈರಪ್ಪ ಸಾಹಿತ್ಯ ಕ್ಷೇತ್ರದಲ್ಲಿ ದಂತಕತೆಯಾಗಿ ಮೆರೆದವರು: ದೇಶಪಾಂಡೆ
ಉಡುಪಿ, ಅ.25: ಅಮೋಘ ಉಡುಪಿ ವತಿಯಿಂದ ಹಿರಿಯ ಸಾಹಿತಿ ದಿ.ಎಸ್.ಎಲ್.ಬೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕರ್ಣಾಟಕ ಬ್ಯಾಂಕಿನ ಅಧಿಕಾರಿ, ಹಿರಿಯ ಸಾಹಿತಿ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ಬೈರಪ್ಪ ಆ ಕಾಲಕ್ಕೆ ಕಡುಬಡತನವನ್ನು ಮೀರಿ ಸಾಹಿತ್ಯವನ್ನು ಕಟ್ಟಿ ದಂತಕತೆಯಾಗಿ ಮೆರೆದವರು. ಬೈರಪ್ಪ ಅವರನ್ನು ದೂರ ಮಾಡಿ ಕನ್ನಡ ಸಾಹಿತ್ಯ ಇಲ್ಲವೇ ಇಲ್ಲ ಎಂಬ ಸ್ಥಿತಿ ಇದೆ. ಆ ಮಟ್ಟದಲ್ಲಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎ.ಎಸ್.ಎನ್.ಹೆಬ್ಬಾರ್, ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ನಿಕೇತನ ನುಡಿನಮನ ಸಲ್ಲಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಅಮೋಘ ಸಂಚಾಲಕ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಬೆಟ್ಟು ಉಪಸ್ಥಿತರಿದ್ದರು. ಅಮೋಘ ಸಂಘಟನೆಯ ಪೂರ್ಣಿಮಾ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ಬಂಡಿ ಕಾರ್ಯಕ್ರಮ ನಿರೂಪಿಸಿದರು.