ಶಿರ್ವ ಗ್ರಾಪಂ ಮೇಲ್ದರ್ಜೆಗೇರಿಸಲು ಶಿಫಾರಸ್ಸು: ಸಚಿವೆ ಹೆಬ್ಬಾಳ್ಕರ್
ಕಾಪು, ನ.1: ಶಿರ್ವ ಗ್ರಾಮ ಪಂಚಾಯತ್‌ನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾ ಗುವುದು. ಪಟ್ಟಣ ಪಂಚಾಯತ್ ಮಾಡಲು ಶಿರ್ವ ಗ್ರಾಪಂ ಎಲ್ಲಾ ರೀತಿಯಲ್ಲಿ ಅರ್ಹತೆ ಹೊಂದಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಡಿಸೆಂಬರ್ ತಿಂಗಳಲ್ಲಿ ನಡೆಯದಿದ್ದರೆ ಶಿರ್ವ ಗ್ರಾಪಂನ್ನು ಮೇಲ್ದರ್ಜೆ ಗೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕಾಪು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಉದ್ಯಾವರ ಹಾಗೂ ಶಿರ್ವ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸವಲತ್ತು ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕಾಪು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳ ಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ನೀಡಲಾಗುವುದು. ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇನ್ನೂ 26 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಸರಕಾರ ಮಹಿಳೆಯರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 24 ಕಂತಿನ ಹಣ ಹಾಕಲಾಗಿದೆ. ನವೆಂಬರ್ 19ಕ್ಕೆ ಇಂದಿರಾಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಅಂಗನ ವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಕ್ಕಾಪಡೆ, ಗೃಹಲಕ್ಷ್ಮಿ ವಿವಿಧೋದ್ದೇಶ ಸೊಸೈಟಿಯು ಉದ್ಘಾಟನೆ ಗೊಳ್ಳಲಿದೆ. ಸೊಸೈಟಿಯಲ್ಲಿ ಮೂರು ಲಕ್ಷ ರೂ ವರೆಗೆ ಸಾಲ ನೀಡಲಾಗುವುದು ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಪಂ ಸಿಇಒ ಪ್ರತೀಕ್ ಬಾಯಲ್, ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್, ಕುರ್ಕಾಲು ಗ್ರಾಪಂ ಅಧ್ಯಕ್ಷ ಪ್ರಶಾಂತ್ ಎ.ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
‘ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡೋಣ, ಉಳಿದ ವೇಳೆ ಅಭಿವೃದ್ಧಿ ಕೆಲಸಗಳತ್ತ ಗಮನಹರಿಸೋಣ, ವಿನಯ್ ಕುರ್ಮಾ ಸೊರಕೆ ಅವರು ಸೋತರೂ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ. ಹಾಗೆಯೇ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕನಸು ಹೊಂದಿದ್ದಾರೆ. ನಾನು, ಸೊರಕೆ ಹಾಗೂ ಸುರೇಶ್ ಶೆಟ್ಟಿ, ಮೂವರೂ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ’
-ಲಕ್ಷ್ಮೀ ಹೆಬ್ಬಾಳಕರ್, ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ