×
Ad

ಯಕ್ಷಗಾನ ಕಲಾರಂಗದಿಂದ ಕಲಾವಿದರಿಗೆ ಬಸ್‌ಪಾಸ್ ವಿತರಣೆ

Update: 2025-12-17 21:45 IST

ಉಡುಪಿ, ಡಿ.17: ಯಕ್ಷಗಾನ ಕಲಾರಂಗ ಪ್ರತೀವರ್ಷ ಪ್ರಕಟಿಸುತ್ತಿರುವ ವೃತ್ತಿನಿರತ ಯಕ್ಷಗಾನ ಕಲಾವಿದರಾದ 1300 ಯಕ್ಷನಿಧಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ 2026ನೇ ಸಾಲಿನ ಡೈರಿಯನ್ನು ಪ್ರಕಟಿಸಿ ಬಿಡುಗಡೆಗೊಳಿಸಿದೆ.

2026ರ ಯಕ್ಷನಿಧಿ ಡೈರಿಯನ್ನು ಇಂದು ಬಾರಕೂರು ಸಮೀಪದ ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಳದಲ್ಲಿ ಅಮೃತೇಶ್ವರೀ ಮೇಳದ ಸಂಚಾಲಕರೂ, ಗೀತಾನಂದ ಫೌಂಡೇಶನ್ ಅಧ್ಯಕ್ಷರೂ ಆದ ಆನಂದ ಸಿ. ಕುಂದರ್ ಬಿಡುಗಡೆಗೊಳಿಸಿ, ಸಂಸ್ಥೆಯ ನಿರಂತರ ಕಾರ್ಯಚಟುವಟಿಕೆಗಳಿಗೆ ಶುಭಹಾರೈಸಿದರು.

ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘ ನೀಡುತ್ತಾ ಬಂದ ಶೇ.50ರ ರಿಯಾಯತಿಯ ಬಸ್‌ಪಾಸನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಅವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು.

ಸದ್ಯ ಇರುವ 10 ತಿಂಗಳ ಅವಧಿಯ ಬಸ್‌ಪಾಸ್ ಸೌಲಭ್ಯವನ್ನು ಮುಂದೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಒಂದು ವರ್ಷಕ್ಕೆ ವಿಸ್ತರಿಸುವ ಯೋಚನೆ ಇದೆ ಎಂದು ಈ ಸಂದರ್ಭದಲ್ಲಿ ಸುರೇಶ್ ನಾಯಕರು ನುಡಿದರು.

ಕರಾವಳಿಯ ವಿವಿಧ ಯಕ್ಷಗಾನ ಮೇಳಗಳ 500ಕ್ಕೂ ಅಧಿಕ ಕಲಾವಿದರು ಪ್ರತಿ ವರ್ಷ ಈ ಸೌಲಭ್ಯವನ್ನು ಪಡೆಯು ತ್ತಿದ್ದಾರೆ ಎಂದು ತಮ್ಮ ಪ್ರಾಸಾವ್ತಿಕ ಮಾತುಗಳಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ನಾರಾಯಣ ಎಂ. ಹೆಗಡೆ, ಭುವನಪ್ರಸಾದ್ ಹೆಗ್ಡೆ, ಸಂತೋಷ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿವಿಧ ಮೇಳಗಳ ಪ್ರತಿನಿಧಿಗಳಾದ ಹರಿಶ್ಚಂದ್ರ ಆಚಾರ್ಯ, ಕೃಷ್ಣ ಪಿ., ಜ್ಞಾನೇಂದ್ರ ತೀರ್ಥಹಳ್ಳಿ, ಆನಂದ ದೇವಾಡಿಗ, ರವಿ ನಾಯಕ, ಶ್ರೇಯಸ್, ಸುದೇಶ್, ರಾಜೇಶ್ ಬೈಕಾಡಿ, ಶ್ರೀನಿವಾಸ ಅಡಿಗ, ರವಿ ನಾಯ್ಕ್ ಬಾಡ, ಸುಕೇಶ್, ಸುರೇಶ್ ಆಚಾರ್ಯ, ವಂಡಾರು ರಮೇಶ್ ಮಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News