×
Ad

ಡಿ.21ಕ್ಕೆ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂನಿಂದ ಜನದನಿ ರ್‍ಯಾಲಿ

Update: 2025-12-17 21:49 IST

ಉಡುಪಿ, ಡಿ.17: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ರಾಜ್ಯಾದ್ಯಂತ ಇರುವ ತನ್ನ ಜಿಲ್ಲಾ ಸಮಿತಿಗಳ ಮೂಲಕ ನ.1ರಿಂದ ಡಿ.15ರವರೆಗೆ 45 ದಿನಗಳ ಕಾಲ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಜನವಿರೋಧಿ ನೀತಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ತಿಳಿಸಿದರು.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 45 ದಿನಗಳ ಮನೆ ಮನೆ ಪ್ರಚಾರ ಆಂದೋಲನದ ಸಮಾರೋಪವಾಗಿ ಇದೇ ಡಿ.21ರಂದು ಬೆಂಗಳೂರಿನಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂ ಜನದನಿ ರ್ಯಾಲಿಯನ್ನು ಆಯೋಜಿಸಿದೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿಯ ಬಹಿರಂಗ ಅಧಿವೇಶನದಲ್ಲಿ ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯರಾದ ಯು.ವಾಸುಕಿ ಹಾಗೂ ರಾಜ್ಯದ ಹಿರಿಯ ಸಿಪಿಎಂ ನಾಯಕರು ಮಾತನಾಡಲಿದ್ದಾರೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.

ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ರ್ಯಾಲಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 30ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲೆಯಿಂದಲೂ ಸಾವಿರಾರು ಮಂದಿ ಪಾಲ್ಗೊಳ್ಳು ವರು. ಮಧ್ಯಮ ಹಾಗೂ ಬಡರೈತರು, ಬಗರಹುಕುಂ ಸಾಗುವಳಿದಾರರು, ಭೂಸ್ವಾಧೀನ ವಿರೋಧಿ ಹೋರಾಟ ನಿರತ ಸಂತ್ರಸ್ತ ರೈತರು, ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ಸರಕಾರಿ ವಲಯದ ಯೋಜನಾ ಕಾರ್ಮಿಕರು, ಗುತ್ತಿಗೆ ನೌಕರರು, ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು, ಕೃಷಿ ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರಗಳ ಜನವಿರೋಧಿ ನೀತಿಗಳಿಂದ ಜನ ಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮಗಳು ಬೀರುತಿದ್ದು, ಇದಕ್ಕೆ ಬದಲಿಯಾಗಿ ಪರ್ಯಾಯ ರಾಜಕಾರಣಕ್ಕೆ ಜನರು ಒಲವು ತೋರ ಬೇಕಾಗಿದೆ. ರ್ಯಾಲಿಯಲ್ಲಿ ಪರ್ಯಾಯ ರಾಜಕಾರಣದ ಅನಿವಾರ್ಯತೆಯನ್ನು ಜನತೆಗೆ ಮನವರಿಕೆ ಮಾಡಲಾ ಗುವುದು. ಮಾತ್ರವಲ್ಲ ರಾಜ್ಯದ ಜನ ಎದುರಿಸುತ್ತಿರುವ 20ಕ್ಕೂ ಅಧಿಕ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಲನ್ನು ಒತ್ತಾಯಿಸಲು ಸಾರ್ವಜನಿಕರ ಸಹಿಸಂಗ್ರಹ ನಡೆಯುತ್ತಿದೆ ಎಂದರು.

ಕೃಷಿ ಬಿಕ್ಕಟ್ಟು, ಭೂಮಿ ಪ್ರಶ್ನೆ, ಕಾರ್ಮಿಕರ ಹಕ್ಕುಗಳು, ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣ, ಆರೋಗ್ಯ, ಹೆಚ್ಚುತ್ತಿರುವ ಅಸಮಾನತೆ, ಪಡಿತರ ವ್ಯವಸ್ಥೆ, ವಸತಿ-ನಿವೇಶನ, ದಲಿತ, ಮಹಿಳೆ, ಅಲ್ಪಸಂಖ್ಯಾತರು, ಕೋಮುವಾದ-ಜಾತೀವಾದ, ವಿವಿಧ ಸೇವೆಗಳ ಖಾಸಗೀಕರಣದ ಕುರಿತಂತೆ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ಸುರೇಶ್ ಕಲ್ಲಾಗರ ಹೇಳಿದರು. ಹಕ್ಕೊತ್ತಾಯದ ಕೈಪಿಡಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ನಾಯಕರಾದ ಶಶಿಧರ ಗೊಲ್ಲ, ಚಂದ್ರಶೇಖರ ವಿ., ಕವಿರಾಜ್ ಕಾಂಚನ್, ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News