ಉಡುಪಿ ಜಿಲ್ಲಾಸ್ಪತ್ರೆಯ ಸೇವಾ ನಿವೃತ್ತ ವೈದ್ಯರಿಗೆ ಬೀಳ್ಕೋಡುಗೆ
ಉಡುಪಿ, ಜ.2: ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಡಿ.31ರಂದು ವೈದ್ಯಕೀಯ ಸೇವೆಯಿಂದ ನಿವೃತ್ತರಾದ ಜನರಲ್ ಸರ್ಜನ್ (ಅಂಕೋಲಾಜಿಸ್ಟ್) ಡಾ. ವೆಂಕಟೇಶ್ ಎನ್. ಹಾಗ ಹಿರಿಯ ಅರವಳಿಕೆ ತಜ್ಞ ಡಾ.ಉಮೇಶ್ ಉಪಾಧ್ಯ ಇವರಿಗೆ ಜಿಲ್ಲಾ ಆಸ್ಪತ್ರೆ ವತಿಯಿಂದ ಬೀಳ್ಕೋಡುಗೆ ಕಾರ್ಯಕ್ರಮವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ನಿವೃತ್ತ ವೈದ್ಯರ ನಿವೃತ್ತ ಜೀವನಕ್ಕೆ ಶುಭ ಹಾರೈಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ಇಬ್ಬರು ತಜ್ಞ ವೈದ್ಯರು ನಗುಮೊಗದ ಉತ್ತಮ ಸೇವೆಯ ಮೂಲಕ ಕ್ಯಾನ್ಸರ್ ರೋಗಿಗಳ ಪಾಲಿಗೆ ಆಶಾಕಿರಣವಾ ಗಿದ್ದರು ಎಂದರು.
ಈ ಸಂದರ್ಭದಲ್ಲಿ ಇಬ್ಬರು ವೈದ್ಯರಿಗೂ ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಿ ಬೀಳ್ಕೊಡಲಾಯಿತು. ಡಾ. ಎಚ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಕಾಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್, ತಜ್ಞ ವೈದ್ಯರಾದ ಡಾ ನಿಖಿನ್ ಶೆಟ್ಟಿ, ಇಎನ್‌ಟಿ ತಜ್ಞರಾದ ಡಾ.ಮುರಳೀಧರ್ ಪಾಟೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರು, ನರ್ಸಿಂಗ್ ಅಧಿಕಾರಿ ಗಳು, ಸಿಬ್ಬಂದಿಗಳು, ತಾಯಿ ಮಕ್ಕಳ ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರು ಉಪಸ್ಥಿತರಿದ್ದರು.