×
Ad

ಜ.3-11: ಲಯನ್ಸ್ ಕ್ಲಬ್‌ನಿಂದ ಹಸಿವು ನಿವಾರಣಾ ಸೇವಾ ವಾರ

Update: 2026-01-02 19:52 IST

ಉಡುಪಿ, ಜ.2: ಹಸಿವು ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿ ಸುವ ಉದ್ದೇಶದಿಂದ ಲಯನ್ಸ್ ಜಿಲ್ಲೆ 317ಸಿ, ಲಯನ್ಸ್ ಕ್ಲಬ್ ಮಣಿಪಾಲದ ಸಹಯೋಗದಲ್ಲಿ ಉಡುಪಿಯಲ್ಲಿ ಜ.3ರಿಂದ 11ರವರೆಗೆ ಹಸಿವು ನಿವಾರಣಾ ಸೇವಾ ವಾರ ವನ್ನು ಆಚರಿಸುತ್ತಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್ ತಿಳಿಸಿದ್ದಾರೆ.

ಲಯನ್ಸ್ ಇಂಟರ್‌ನೇಶನಲ್‌ನ ಸೂಚನೆಯಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಸಿವು ನಿವಾರಣಾ ಸಪ್ತಾಹವನ್ನು ಆಚರಿಸಲಾಗುತಿದ್ದು, ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದರಿಂದ ಒಂದೂವರೆ ಲಕ್ಷ ಜನರಿಗೆ ಪೌಷ್ಠಿಕ ಆಹಾರವನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಈ ಅವಧಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಸೇವಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜ.3ರಂದು ಬೆಳಗ್ಗೆ 9:30ಕ್ಕೆ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದೂ ಸ್ವಪ್ನಾ ಸುರೇಶ್ ಹೇಳಿದರು.

ನಗರಸಭೆ ಹಾಗೂ ಕಾರ್ಪೋರೇಟರ್‌ಗಳ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತಿದ್ದು, ಮಹಾ ಆಹಾರ ವಿತರಣಾ ಅಭಿಯಾನಕ್ಕೆ ಧ್ವಜಾರೋಹಣ ನೆರವೇರಿಸಿ, ಹಸಿವು ನಿವಾರಣಾ ವಾರದ ಪ್ರತಿಜ್ಞಾ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಪ್ರತಿದಿನವೂ ಒಂದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಒಂದು ದಿನ ಸಮುದಾಯ ಅಡುಗೆಮನೆ ಎಂಬ ವಿಶೇಷ ಅಭಿಯಾನದಡಿ ಪ್ರತಿಯೊಂದು ಕ್ಲಬ್ ಒಂದೊಂದು ಸಮುದಾಯ ಅಡುಗೆಮನೆ ನಡೆಸಲು ಅಥವಾ ಬೆಂಬಲಿಸಲು ಮುಂದಾಗಲಿದೆ. ಪ್ರತಿ ಕ್ಲಬ್ ಕನಿಷ್ಠ 250 ಜನರಿಗೆ ಬಿಸಿ ಊಟ ವಿತರಿಸುವ ಗುರಿ ಹೊಂದಿದೆ.

ಶಾಲಾ ಪೌಷ್ಟಿಕ ಆಹಾರ ದಿನದಂದು ಸರಕಾರಿ ಶಾಲಾ ಮಕ್ಕಳಿಗೆ ಉಪಹಾರ ಅಥವಾ ಹಣ್ಣುಗಳ ಕಿಟ್ ವಿತರಿಸಲಾಗುವುದು. ಜೊತೆಗೆ ಮಕ್ಕಳ ಪಾಲಕರಿಗೆ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾ ಗುತ್ತದೆ. ಹಸಿವು ರಹಿತ ಸ್ಲಂ ಅಭಿಯಾನದಡಿ ಸ್ಲಂ ಪ್ರದೇಶಗಳನ್ನು ಗುರುತಿಸಿ (ಮ್ಯಾಪಿಂಗ್), ಪ್ರತಿ ಕುಟುಂಬಕ್ಕೆ ಒಂದು ವಾರದ ರೇಷನ್ ಕಿಟ್ ವಿತರಿಸಲಾಗುತ್ತದೆ.

ಇದಲ್ಲದೆ ಆಹಾರ ವ್ಯರ್ಥದಿಂದ ಆಹಾರ ತಟ್ಟೆಗೆ ಎಂಬ ಅಭಿಯಾನದಡಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮದುವೆ ಮಂಟಪಗಳೊಂದಿಗೆ ಸಹಕರಿಸಿ, ಉಳಿದ ಆಹಾರವನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ವಿತರಿಸಲಾಗುತ್ತದೆ. ರೈತರು ಮತ್ತು ಲಯನ್ಸ್ ಸಂಪರ್ಕ ದಿನದಂದು ಆಶ್ರಮ ಗಳು, ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮಗಳಿಗೆ ನೇರ ಆಹಾರ ವಿತರಣೆ ಮಾಡಲಾಗುತ್ತದೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ಗಣೇಶ್ ಪೈ ವಿವರಿಸಿದರು.

ಹಿರಿಯ ನಾಗರಿಕರು ಮತ್ತು ಆಶ್ರಯ ಗೃಹ ದಿನದಂದು ವೃದ್ಧಾಶ್ರಮಗಳಲ್ಲಿ ಬಿಸಿ ಊಟ ವಿತರಣೆ, ರಾಗಿ, ಖರ್ಜೂರ, ಬಹುಧಾನ್ಯಗಳನ್ನೊಳಗೊಂಡ ವಿಶೇಷ ಪೌಷ್ಟಿಕ ಕಿಟ್‌ಗಳ ವಿತರಣೆ ಹಾಗೂ ಆಶ್ರಮವಾಸಿಗಳ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತದೆ.

ಆಸ್ಪತ್ರೆ ಮತ್ತು ರೋಗಿ ಸಹಾಯಕ ದಿನದಂದು ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜೊತೆಗೆ ಆಸ್ಪತ್ರೆ ಆಡಳಿತದ ಸಹಕಾರದಲ್ಲಿ ಲಯನ್ಸ್ ಅನ್ನಪೂರ್ಣ ಕೌಂಟರ್ (ಪೈಲಟ್ ಯೋಜನೆ) ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

ಹಸಿವು ನಿವಾರಣಾ ಸೇವಾ ವಾರದ ಸಮಾರೋಪವಾಗಿ ಮಹಾ ಆಹಾರ ಸೇವಾ ಉತ್ಸವ ವನ್ನು ಹಮ್ಮಿಕೊಳ್ಳಲಾ ಗುತ್ತದೆ. ಇದು ಹಲವು ಜಿಲ್ಲೆಗಳ ಸಂಯುಕ್ತ ಸೇವಾ ದಿನವಾಗಿದ್ದು, ಸಮಾರೋಪ ರ್ಯಾಲಿಯೊಂದಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಕ್ಲಬ್‌ಗಳಿಗೆ ಗೌರವ ಪ್ರಮಾಣಪತ್ರ ವಿತರಿಸಲಾಗುತ್ತದೆ.

ಸಮಾಜದ ಪ್ರತಿಯೊಬ್ಬರಿಗೂ ಆಹಾರ ದೊರಕುವ ಮೂಲಕ ಹಸಿವು ಮುಕ್ತ ಸಮಾಜದ ನಿರ್ಮಾಣಗೊಳ್ಳಬೇಕೆಂಬ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ ಹಸಿವು ನಿವಾರಣಾ ಸೇವಾವಾರವನ್ನು ಯಶಸ್ವಿ ಗೊಳಿಸುವಂತೆ ಡಾ.ಪೈ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎರಡನೇ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಕಾರ್ಯಕ್ರಮ ಸಂಚಾಲಕ ಕೇಶವ ಅಮೀನ್, ಲಯನ್ಸ್ ಮಣಿಪಾಲ ಅಧ್ಯಕ್ಷ ಡಾ. ನಿಶಾಂತ್ ಭಟ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News