ಸ್ವಉದ್ಯೋಗಕ್ಕೆ ಸಂಜೀವಿನಿ ಮಾದರಿಯಾಗಲಿ: ಗುರುರಾಜ್ ಗಂಟಿಹೊಳೆ
ಉಡುಪಿ, ಜ.2: ಗ್ರಾಮೀಣ ಮಹಿಳೆಯರ ಸಾಮಾಜಿಕ ಸಬಲೀಕರಣಕ್ಕಾಗಿ ಪ್ರಾರಂಭಿಸಲಾಗಿರುವ ಸಂಜೀವಿನಿ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಸ್ವಉದ್ಯೋಗದ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಈಗಾಗಲೇ ಸಂಜೀವಿನಿಯ ಮಹಿಳೆಯರು ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಸಾಲ, ಇಲಾಖೆಗಳ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಚಟುವಟಿಕೆ ನಡೆಸುತ್ತಿದ್ದಾರೆ. ಈ ಮಹಿಳೆಯರನ್ನು ಮಾದರಿಯಾಗಿಸಿ ಪ್ರತಿ ಗ್ರಾಮದ ಸಂಜೀವಿನಿ ಮಹಿಳೆಯರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮಿಗಳಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ, ಕೃಷಿಯೇತರ, ಪ್ರವಾಸೋದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರತಿನಿಧಿಸಬೇಕು. ಇಂದು ಗ್ರಾಮೀಣ ಜನರು ನಿರುದ್ಯೋಗದ ಸಮಸ್ಯೆಯಿಂದ ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಸ್ಥಳೀಯ ವಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಗಂಟಿಹೊಳೆ ತಿಳಿಸಿದರು.
ಪ್ರತಿ ಗ್ರಾಮಪಂಚಾಯತ್‌ನಲ್ಲಿ ಗ್ರಾಮೋತ್ಸವ ನಡೆಸಲಾಗುತ್ತಿದ್ದು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಇದರಲ್ಲಿ ಆಸಕ್ತಿಯಿಂದ ಭಾಗವಹಿಸಿ ಇಲ್ಲಿ ದೊರಕುವ ಪ್ರಯೋಜನ ಪಡೆಯಬೇಕು ಎಂದರು.
ಬೈಂದೂರು ಉತ್ಸವದಲ್ಲಿ ಸಂಜೀವಿನಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂರು ಮಾರಾಟ ಮಳಿಗೆ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಿಳೆಯರು ಆಸಕ್ತಿ ಯಿಂದ ಭಾಗವಹಿಸುವುದರ ಮೂಲಕ ಭವಿಷ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರೇ ನಡೆಸಿಕೊಂಡು ಹೋಗುವಷ್ಟು ಸಬಲರಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಭಾಯಲ್, ಉಪಕಾರ್ಯದರ್ಶಿ ಶ್ಯಾಮ್ ಎಸ್ ಕದ್ರೊಳ್ಳಿ, ಯೋಜನಾ ನಿರ್ದೇಶಕ ವಿಜಯ್ ಕುಮಾರ್, ನಿವೃತ್ತ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಅಲಿ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಹರೀಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯ, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಸೌಮ್ಯ, ಜಿಲ್ಲಾ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು, ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟ ಅಧ್ಯಕ್ಷರು, ಕೃಷಿ ಸಖಿಯರು, ಪಶು ಸಖಿಯರು ಹಾಗೂ ಇತರರು ಉಪಸ್ಥಿತರಿದ್ದರು.