ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನಿಯಂತ್ರಣಕ್ಕೆ ಸಂಘದ ಆಗ್ರಹ
ಉಡುಪಿ, ಜ.2: ಇತ್ತೀಚೆಗೆ ಉಡುಪಿ-ಮಣಿಪಾಲದಲ್ಲಿ ಹೊರ ರಾಜ್ಯದ ಖಾಸಗಿ ಸಂಸ್ಥೆಯೊಂದು ‘ನಮ್ಮ ಯಾತ್ರಿ’ ಆ್ಯಪ್ ಮೂಲಕ, ರಾಜ್ಯ ಸರಕಾರ ಟ್ಯಾಕ್ಸಿಗಳಿಗೆ ನಿಗದಿ ಪಡಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಜಿಲ್ಲೆಯಾದ್ಯಂತ ಟ್ಯಾಕ್ಸಿ ಮತ್ತು ಅಟೋರಿಕ್ಷಾಗಳ ಬಾಡಿಗೆ ಮಾಡುತಿದ್ದು, ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಜಿಲ್ಲಾ ಟ್ಯಾಕ್ಸಿಮನ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ರಮೇಶ್ ಕೆ.ಕೋಟ್ಯಾನ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಇದನ್ನು ತಡೆಯದಿದ್ದರೆ ಸ್ಥಳೀಯ ಟ್ಯಾಕ್ಸಿ ಚಾಲಕ ಮತ್ತು ಮಾಲಕರಿಗೆ ದೊಡ್ಡ ರೀತಿಯಲ್ಲಿ ಹೊಡೆತ ಬೀಳಲಿದ್ದು, ಪ್ರಯಾಣಿಕರಿಗೂ ಇದರಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಆ್ಯಪ್ ಮೂಲಕ ನಿಗದಿಗಿಂತ ಕಡಿಮೆ ದರದಲ್ಲಿ ಬಾಡಿಗೆ ಮಾಡುವುದರಿಂದ ಜಿಲ್ಲೆಯ ಸಾವಿರಾರು ಮಂದಿ ಟ್ಯಾಕ್ಸಿ ಚಾಲಕ-ಮಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಸರಕಾರದ ದರಪಟ್ಟಿಯಂತೆ ನಾವು ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ 1,700 ರೂ. ಬಾಡಿಗೆ ತೆಗೆದುಕೊಳ್ಳು ತಿದ್ದೇವೆ. ಆದರೆ ನಮ್ಮ ಯಾತ್ರಿ ಆ್ಯಪ್ ಮೂಲಕ ಬುಕ್ ಮಾಡಿದವರಿಗೆ 1050ರೂ. ಬಾಡಿಗೆ ಪಡೆಯಲಾಗುತ್ತಿದೆ ಎಂದವರು ವಿವರಿಸಿದರು.
ಇಲ್ಲಿಂದ ಸ್ಥಳೀಯ ಟ್ಯಾಕ್ಸಿಗಳು ಪ್ರಯಾಣಿಕರನ್ನು ಮಂಗಳೂರಿಗೆ ಕರೆದೊಯ್ದು, ಖಾಲಿಯಾಗಿ ಮರಳಿ ಬರುತ್ತವೆ. ಆದರೆ ಆ್ಯಪ್‌ನಲ್ಲಿ ಹೋಗುವಾಗ ಮಾತ್ರ ಕಡಿಮೆ ದರ ಪಡೆದು ಬರುವಾಗ ಸ್ಥಳೀಯ ಟ್ಯಾಕ್ಸಿಗಿಂತಲೂ ದುಬಾರಿ ದರವಿದೆ. ಅವರು 2000ರೂ. ಪಡೆಯುತಿದ್ದಾರೆ ಎಂದು ರಮೇಶ್ ಕೋಟ್ಯಾನ್ ದೂರಿದರು.
ಈಗಾಗಲೇ ಜಿಲ್ಲೆಯಾದ್ಯಂತ ಖಾಸಗಿ ವಾಹನಗಳು (ವೈಟ್ ಬೋರ್ಡ್) ಬಾಡಿಗೆ ಮಾಡುತ್ತಿರುವುದು ಹಾಗೂ ಸರಕಾರಗಳ ಪ್ಯಾನಿಕ್ ಬಟನ್ ಅಳವಡಿಕೆಯ ಅವೈಜ್ಞಾನಿಕ ನಿರ್ಧಾರದಿಂದ ಟ್ಯಾಕ್ಸಿ ಚಾಲಕರು ಬಹಳಷ್ಟು ಕಷ್ಟ ಅನುಭವಿಸುತಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ಯಾನಿಕ್ ಬಟನ್‌ನ ವಾರ್ಷಿಕ ನಿರ್ವಹಣಾ ವೆಚ್ಚವೆಂದು 1,800ರೂ. ಬದಲಿಗೆ 4,000ರೂ.ಗಳನ್ನು ಖಾಸಗಿ ಕಂಪೆನಿ ಮೂಲಕ ವಸೂಲಿ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಆದ್ದರಿಂದ ನಮ್ಮ ಯಾತ್ರಿ ಆ್ಯಪ್‌ನ ಮಾಲಕರನ್ನು ಕರೆಸಿ ಅವರಿಗೆ ಸರಕಾರದ ನಿಯಮಾವಳಿಯನ್ನು ಪಾಲಿಸಲು ಸೂಚಿಸಬೇಕು. ಇಲ್ಲದಿದ್ದರೆ ಉಡುಪಿ ಜಿಲ್ಲೆ ಯಲ್ಲಿ ಆ್ಯಪ್‌ನ್ನು ನಿಷ್ಕೃಿಯಗೊಳಿಸಬೇಕು ಹಾಗೂ ಪ್ಯಾನಿಕ್ ಬಟನ್‌ಗೆ ನ್ಯಾಯಾಲಯದ ಆದೇಶದಂತೆ ಸಾರಿಗೆ ಇಲಾಖೆ ನಿಗದಿ ಪಡಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಜಿ.ಆರ್.ಷಣ್ಮುಗಪ್ಪ, ಶಿವಣ್ಣ, ಪ್ರಕಾಶ್ ಅಡಿಗ, ಸತೀಶ್ ನಾಯಕ್, ಸತೀಶ್ ಶೆಟ್ಟಿ, ಕೃಷ್ಣ, ಮಹೇಶ್‌ಕುಮಾರ್, ಜಾನ್ ಮುಂತಾದವರು ಉಪಸ್ಥಿತರಿದ್ದರು.