×
Ad

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ವಾರ್ಷಿಕ ಮಹೋತ್ಸವ

Update: 2026-01-28 20:21 IST

ಕಾರ್ಕಳ, ಜ.28: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಮಹೋತ್ಸವದ ಮುಖ್ಯ ದಿನವಾದ್ದರಿಂದ ಬೆಳಗ್ಗೆಯಿಂದ ತಡರಾತ್ರಿ ತನಕ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಬೇಡಿಕೆಗಳನ್ನು ಸಮರ್ಪಿಸಿದರು.

ಸಾಂಪ್ರದಾುಕವಾಗಿ, ಭಕ್ತರು ಬಲಿಪೂಜೆಗೆ ಹಾಜರಾಗುವ ಮೊದಲು ಪಾಪನಿವೇದನಾ ಸಂಸ್ಕಾರವನ್ನು ಸ್ವೀಕರಿಸಲು ಸಾಲಿನಲ್ಲಿ ನಿಂತರು. ದಿನಪೂರ್ತಿ ದೀರ್ಘ ಸಾಲುಗಳು ಕಾಣಿಸಿಕೊಂಡವು. ಪಡೆದ ಕೃಪೆಗಳಿಗಾಗಿ ಕೃತಜ್ಞತೆಯ ಸಂಕೇತವಾಗಿ ಭಕ್ತರು ಬಲಿಪೂಜೆ ಅರ್ಪಣೆಗಳನ್ನು ಸಮರ್ಪಿಸಿದರು. ಸ್ಥಳದಲ್ಲಿದ್ದ ಯಾಜಕರು ರೋಗಿಗಳು ಮತ್ತು ಮಕ್ಕಳ ಮೇಲೆ ತಮ್ಮ ಹಸ್ತವನ್ನು ಚಾಚಿ ಆಶೀರ್ವದಿಸಿ ಅವರ ಆರೋಗ್ಯ ಮತ್ತು ಸುಭೀಕ್ಷೆಗಾಗಿ ಪ್ರಾರ್ಥಿಸಿದರು.

ಮಹೋತ್ಸವದ ಎರಡು ಪ್ರಮುಖ ಬಲಿಪೂಜೆಗಳು ನಡೆದವು. ಬೆಳಗ್ಗಿನ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೋ ನೆರವೇರಿಸಿದರು. ಸಂಜೆಯ ಬಲಿಪೂಜೆಯನ್ನು ಅಜ್ಮಿರ್‌ನ ನೂತನ ಧರ್ಮಾಧ್ಯಕ್ಷ ಪರಮಪೂಜ್ಯ ಧರ್ಮಾಧ್ಯಕ್ಷ ಡಾ.ಜಾನ್ ಕಾರ್ವಾಲೋ ನೆರವೇರಿಸಿದರು.

ಬಳಿಕ ಅವರು ತಮ್ಮ ಸಂದೇಶದಲ್ಲಿ, ನಾನು ನಿಮ್ಮನ್ನು ಪ್ರೀತಿಸಿದ್ದೇನೆ ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿ, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭಸಿ, ಅದನ್ನು ದೀನದಲಿತರಾದ ಸಹೋದರ ಸಹೋದರಿಯ ರೊಂದಿಗೆ ಹಂಚಿಕೊಳ್ಳುವ ಮೂಲಕ ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು.

ಇತರ ಬಲಿಪೂಜೆಗಳನ್ನು ಐಸಿವೈಎಂ ನಿರ್ದೇಶಕ ವಂ.ಸ್ಟೀವನ್ ಫೆನಾರ್ಂಡಿಸ್, ಚಿಕ್ಕಮಗಳೂರು ಸುಂಡೇಕೆರೆಯ ವಂ.ಅನಿಲ್ ಲೋಬೋ, ಮಂಗಳೂರು ಗ್ಲಾಡ್ಸಮ್ ಹೋಮ್‌ನ ವಂ.ಕ್ಲಾನಿ ಡಿಸೋಜ, ಕಡಬ ಶಾಲೆಯ ಪ್ರಾಂಶುಪಾಲ ವಂ.ಸುನಿಲ್ ಪಿಂಟೊ, ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜ, ಮಂಗಳೂರು ಮಂಗಳ ಜ್ಯೋತಿ ನಿರ್ದೇಶಕ ವಂ.ರೋತ್ ಡಿಕೋಸ್ಟಾ, ಮೂಡಬಿದ್ರೆ ಅಲಂಗಾರ್ ಸಿಎಸ್ ಎಸ್‌ಆರ್ ಸಭೆಯ ವಂ.ರೋಹನ್ ಡಯಾಸ್ ನೆರವೇರಿಸಿ ರೋಗಿಗಳ ಮೇಲೆ ಪ್ರಾರ್ಥಿಸಿದರು.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಉತ್ಸವದ ಶುಭಾಶಯಗಳನ್ನು ಕೋರಿದರು. ನಾಳೆ ಸಂಪ್ರದಾಯದಂತೆ ಕೃತಜ್ಞತೆಯ ತಾಯಿಯಾದ ಮಾತೆ ಮೇರಿಯವರ ಗೌರವಾರ್ಥ ಬಲಿಪೂಜೆ ಅರ್ಪಿಸಲಾಗುವುದು. ಸಂಜೆ 6ಗಂಟೆಯ ಬಲಿಪೂಜೆಯೊಂದಿಗೆ ಮಹೋತ್ಸವದ ಕಾರ್ಯಕ್ರಮಗಳು ಅಂತ್ಯ ಗೊಳ್ಳಲಿವೆ. ಆ ಬಳಿಕ ಜಗತ್ ಜ್ಯೋತಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News