ಪಡುಬಿದ್ರೆ: ಮನೆಗೆ ನುಗ್ಗಿ 48ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಪಡುಬಿದ್ರಿ, ಜ.28: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಪಡುಬಿದ್ರೆ ಸಮೀಪದ ದೀನ್ ಸ್ಟ್ರೀಟ್‌ನಲ್ಲಿ ಜ.27ರಂದು ರಾತ್ರಿ ವೇಳೆ ನಡೆದಿದೆ.
ಮುಹಮ್ಮದ್ ಅಪ್ತಾಬ್ ಅಲಿ ಎಂಬವರ ತಾಯಿ ಮನೆಗೆ ಬೀಗ ಹಾಕಿ ಅಲ್ಲೇ ಹತ್ತಿರದಲ್ಲಿದ್ದ ಮಗಳ ಮನೆಗೆ ಮಂಗಳ ವಾರ ಸಂಜೆಯ ಹೋಗಿದ್ದರು. ಬುಧವಾರ ಮುಂಜಾನೆ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇವರ ಸೊಸೆ ತನ್ನ ತಾಯಿ ಮನೆಗೆ ಹೋಗಿದ್ದು, ಅವರ ಮಗ ದುಬೈಯಲ್ಲಿ ಇರುವುದಾಗಿ ತಿಳಿದುಬಂದಿದೆ.
ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ತುಂಡರಿಸಿ ಅದರಲ್ಲಿದ್ದ 7 ಪವನ್ ಚಿನ್ನದ ನೆಕ್ಲೆಸ್, 5 ಪವನ್ ತೂಕದ ಚಿನ್ನದ ನೆಕ್ಲೆಸ್, ಸುಮಾರು 3 ಪವನ್ ತೂಕದ ಚಿನ್ನದ ಸಣ್ಣ ಚೌಕರ್ ನೆಕ್ಲೆಸ್, ಸುಮಾರು 2.5 ಪವನ್ ತೂಕದ ಚಿನ್ನದ ಸಣ್ಣ ಚೌಕರ್ ನೆಕ್ಲೆಸ್, 15 ಪವನ್ ತೂಕದ ಬಂಗಾರದ ಬಳೆಗಳು, 3 ಪವನ್ ತೂಕದ ಬಂಗಾರದ ಬ್ರೇಸ್ಲೇಟ್, 1 ಪವನ್ ತೂಕದ ಚಿನ್ನದ ಉಂಗುರ, 3 ಪವನ್ ತೂಕದ ಚಿನ್ನದ ಉಂಗುರಗಳು ಸಹಿತ ಮುತ್ತಿನ ಮಣಿಯ ಚಿನ್ನದ ಸರ, ಸಣ್ಣ ಚಿನ್ನದ ಸರಗಳು, ಕಿವಿಯೋಲೆ ಸೇರಿದಂತೆ ಒಟ್ಟು 70 ಪವನ್ ತೂಕದ 48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50000 ರೂ. ಮೌಲ್ಯದ ರಾಡೋ ವಾಚನ್ನು ಕಳವುಗೈದಿದ್ದಾರೆ.
ಮನೆಯಲ್ಲಿ ಸಿಮ್ ಸಹಿತವಾದ ಸಿಸಿಟಿವಿ ಇದ್ದು ಅದನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಆದರೆ ಅದರ ಸಿಮ್ ಸಂದೇಶವು ಮಗನ ಸಿಮ್‌ನಲ್ಲಿ ದಾಖಲಾಗಿದೆ ಎನ್ನಲಾಗಿದೆ. ಸುತ್ತಮುತ್ತ ಹಲವು ಮನೆಗಳಿದ್ದು, ಇಂತಹ ವಸತಿ ಪ್ರದೇಶಕ್ಕೆ ಕಳ್ಳರು ಲಗ್ಗೆ ಇಟ್ಟಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್, ಡಿವೈಎಸ್ಪಿ ಪ್ರಭು ಡಿ.ಟಿ., ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ, ವೈಜ್ಞಾನಿಕವಾಗಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.