ತೆಂಕನಿಡಿಯೂರು ಕಾಲೇಜು: ಮತದಾರ ಜಾಗೃತಿ ಜಾಥಾ
ಉಡುಪಿ, ಜ.28: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಮೈಭಾರತ್ ಇವರ ಸಂಯುಕ್ತ ಆಶ್ರಯದಲ್ಲಿ ಮತದಾರ ದಿನಾಚರಣೆ ಅಂಗವಾಗಿ ವಿಶೇಷಉಪನ್ಯಾಸ, ಮತದಾರ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಮತದಾರ ಜಾಗೃತಿ ಜಾಥವನ್ನು ಆಯೋಜಿಸಲಾಗಿತ್ತು.
ಯುವಜನತೆ ಮತ್ತು ಮತದಾನ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕ ಪ್ರಶಾಂತ್ ನೀಲಾವರ, ಯುವಜನತೆ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಅರ್ಥಪೂರ್ಣ ವಾಗಿ ಮತ ಚಲಾಯಿಸಿದಲ್ಲಿ ಮಾತ್ರ ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗ ಬಲ್ಲದು. ಯುವಜನತೆಯ ನಿರ್ಲಿಪ್ತತೆ ನಿಜಕ್ಕೂ ಕಳವಳಕಾರಿ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೆ ಸಂದರ್ಭದಲ್ಲಿ ಮೈ ಭಾರತ್ ಉಡುಪಿ ಜಿಲ್ಲಾ ಯುವ ಸಮನ್ವಯಾಧಿಕಾರಿ ಉಲ್ಲಾಸ್ ಕೆ.ಟಿ. ನೂತನ ಮತದಾರರ ನೊಂದಣಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ನೂತನ ಮತದಾರರನ್ನು ಅಭಿನಂದಿಸಿದರು.
ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ಶೈಕ್ಷಣಿಕ ಸಲಹೆಗಾರ ಡಾ.ಶ್ರೀಧರ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಂದೇಶ್, ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಳಿಕ ಮತದಾರ ಜಾಗೃತಿ ಘೋಷಣಾ ಫಲಕಗಳೊಂದಿಗೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾದಯಾತ್ರೆಯ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಜಾಥಾದಲ್ಲಿ ಎನ್ನೆಸ್ಸೆಸ್, ಯುವ ರೆಡ್‌ಕ್ರಾಸ್ ಹಾಗೂ ರೋವರ್ -ರೇಂಜರ್ಸ್ ಸ್ವಯಂಸೇವಕರು ಭಾಗಿಯಾಗಿದ್ದರು.