ಉಡುಪಿ| E D ತನಿಖೆ ಹೆಸರಿನಲ್ಲಿ 40 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಜ.28: E D ತನಿಖೆ ಹೆಸರಿನಲ್ಲಿ ಕಟಪಾಡಿಯ ವ್ಯಕ್ತಿಯೊಬ್ಬರಿಗೆ 40ಲಕ್ಷ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿ ಕಲ್ತಟ್ಟ ನಿವಾಸಿ ಕೆ.ರಾಘವೇಂದ್ರ ರಾವ್(45) ಎಂಬವರ ಮೊಬೈಲ್‌ಗೆ ಜ.11ರಂದು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದಿಂದ ಮಾತನಾಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದನು. ‘ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯಿಂದ ಕಾನೂನುಬಾಹಿರ ಚಟುವಟಿಕೆ ಗಳು ಹಾಗೂ ಬೆದರಿಕೆ ಕರೆಗಳನ್ನು ಮಾಡುತ್ತಿರುವುದಾಗಿ ಮುಂಬೈ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ನೀವು ಕೂಡಲೇ ಠಾಣೆಯನ್ನು ಸಂಪರ್ಕಿಸಿ ಎನ್‌ಓಸಿ ಪಡೆದು ಕಳುಹಿಸಿ, ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು 2 ಗಂಟೆಯ ಒಳಗೆ ನಿಷ್ಕ್ರೀಯಗೊಳಿಸಲಾಗುವುದು’ ಎಂದು ಆತ ತಿಳಿಸಿದ್ದನು.
ಅಲ್ಲದೇ ಕರೆಯನ್ನು ಕೊಲಾಬಾ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿ ಕರೆಯನ್ನು ಇನ್ನೊಂದು ನಂಬರ್‌ಗೆ ವರ್ಗಾಯಿಸಿದನು.ಅದರಲ್ಲಿ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಎಂದು ಹೇಳಿಕೊಂಡು ಮಾತನಾಡಿದ ವ್ಯಕ್ತಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಉಪಯೋಗಿಸಿ ಮುಂಬೈಯಲ್ಲಿ ಬ್ಯಾಂಕ್ ಖಾತೆ ತೆರೆದು 4.90 ಕೋಟಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದನು.
ಈ ಸಂಬಂಧ ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿದೆ ಎಂದು ತಿಳಿಸಿ ಆಡಿಯೋ ಕರೆಯನ್ನು ವೀಡಿಯೋ ಕರೆಗೆ ವರ್ಗಾಯಿಸಿದನು. ಆಗ ವಿಕ್ರಮ್ ರಾಥೋಡ್ ಎಂಬ ಹೆಸರಿನ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿದ್ದು, ತಾನು ತನಿಖಾಧಿಕಾರಿಯೆಂದು ತನ್ನ ಗುರುತು ಸಂಖ್ಯೆ ಹಾಗೂ ಹೆಸರನ್ನು ಹೇಳಿಕೊಂಡು ತನಿಖೆಗೆ ಸಹಕರಿಸದಿದ್ದಲ್ಲಿ ಕೂಡಲೇ ಬಂಧಿಸಬೇಕಾಗುತ್ತದೆ ಎಂದು ಹೇಳಿದನು. ನಂತರ ಅದೇ ರೀತಿ ಪ್ರತಿದಿನ ಕರೆ ಮಾಡಿ ವಿಚಾರಣೆ ಎಂದು ವಿವಿಧ ದಾಖಲೆಗಳನ್ನು ಪಡೆದು ಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಪ್ರಕರಣವನ್ನು ಇಡಿಗೆ ವರ್ಗಾಯಿಸಲಾಗಿದ್ದು, ಇಡಿ ನಿರ್ದೇಶಕ ಹೇಳಿ ಕರೆ ಮಾಡಿ, ಹಣ ವರ್ಗಾಯಿಸುವಂತೆ ತಿಳಿಸಿದನು. ಇದನ್ನು ನಂಬಿದ ರಾಘವೇಂದ್ರ ರಾವ್ ಜ.16 ಮತ್ತು 19ರಂದು ತನ್ನ ಪತ್ನಿಯ ಖಾತೆಯಿಂದ ಒಟ್ಟು 25,00,000ರೂ. ಹಾಗೂ ಜ.23ರಂದು ತನ್ನ ಖಾತೆಯಿಂದ 15,00,000ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ, ಒಟ್ಟು 40,00,000ರೂ. ಮೋಸ ಹೋಗಿದ್ದರು ಎಂದು ದೂರಲಾಗಿದೆ.