×
Ad

ಯಕ್ಷಗಾನ ಉಳಿವಿಗೆ ಯುವ ಜನತೆಯ ಸಕ್ರಿಯ ಪಾತ್ರ ಅಗತ್ಯ: ಡಾ. ಎಚ್.ಎಸ್. ಬಲ್ಲಾಳ್

ಚಂದ್ರಗೌಡ ಗೋಳಿಕೆರೆಗೆ ಎಂ.ಎಂ.ಹೆಗ್ಡೆ ಪ್ರಶಸ್ತಿ ಪ್ರದಾನ

Update: 2026-01-28 20:29 IST

ಉಡುಪಿ, ಜ.28: ಯಕ್ಷಗಾನ ನಮ್ಮ ನಾಡಿನ ಅಮೂಲ್ಯ ಸಾಂಸ್ಕೃತಿಕ ಪರಂಪರೆ. ಈ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವ ಜನತೆಯ ಮೇಲಿದೆ. ಯಕ್ಷಗಾನ ತರಬೇತಿ, ಪ್ರದರ್ಶನ ಹಾಗೂ ಅಧ್ಯಯನಗಳಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಿದರೆ ಪ್ರಬುದ್ಧವಾದ ಈ ಕಲೆಯ ಉಳಿವಿಗೆ ಹೊಸ ಉಸಿರು ನೀಡಿದಂತಾ ಗುತ್ತದೆ ಎಂದು ಮಾಹೆ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.

ಇಂದ್ರಾಳಿಯ ಯಕ್ಷಗಾನ ಕೇಂದ್ರ, ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಯಕ್ಷಗಾನ ಕೇಂದ್ರದ 53ನೇ ವಾರ್ಷಿಕೋತ್ಸವ ಹಾಗೂ ಎಂ.ಎಂ ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಣಿಪಾಲದ ಮಾಹೆ ಹಾಗೂ ಯಕ್ಷಗಾನ ಕೇಂದ್ರಗಳ ಸಹಯೋಗ ದಲ್ಲಿ ಯಕ್ಷಗಾನದಲ್ಲಿ ಸರ್ಟಿಫೀಕೆಟ್ ಕೋರ್ಸ್ ಪ್ರಾರಂಭಿಸಲಾಗಿದ್ದು, ಇದರಲ್ಲಿ ಯುವ ಜನತೆಯಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಯಕ್ಷಗಾನ ಕಲೆಯನ್ನು ಭಕ್ತಿಯಿಂದ ಕಲಿತು, ಸಂಭ್ರಮಿಸುತ್ತಿರುವುದು ಸಂತೋಷವನ್ನು ನೀಡುತ್ತಿದೆ ಎಂದರು.

ಮಾಹೆ ವಿವಿಯ ಸಹಕುಲಪತಿ ಡಾ.ನಾರಾಯಣ ಸಭಾಹಿತ್, ನಿವೃತ್ತ ಇಂಜಿನಿಯರ್ ವೈ.ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಾರಣಕಟ್ಟೆ ಮೇಳದ ಹಿರಿಯ ಕಲಾವಿದರಾದ ಚಂದ್ರಗೌಡ ಗೋಳಿಕೆರೆ ಅವರಿಗೆ ‘ಯಕ್ಷರಂಗದ ಭೀಷ್ಮ ಎಂ.ಎಂ ಹೆಗ್ಡೆ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಗೌಡ ಗೋಳಿಕೆರೆ, ಎಂ.ಎಂ. ಹೆಗ್ಡೆ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ನನಗೆ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ನನ್ನ ಪುಣ್ಯಎಂದು ಧನ್ಯತಾಭಾವ ವ್ಯಕ್ತಪಡಿಸಿದರು.

ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್‌ನ ಪ್ರಶಿಕ್ಷಣಾರ್ಥಿ ವಾಣಿ ಮಾತನಾಡಿ, ಗುರುಗಳು ನೀಡಿದ ಮಾರ್ಗದರ್ಶನ, ತರಬೇತಿ ಕ್ರಮ ಎಲ್ಲ ವಿದ್ಯಾರ್ಥಿ ಗಳಿಗೂ ಯಕ್ಷಗಾನ ಕಲಿಕೆಗೆ ಸ್ಫೂರ್ತಿ ನೀಡುತ್ತದೆ. ಯಕ್ಷಗಾನ ಕಲಿಯುವುದಕ್ಕೆ ವಯಸ್ಸು ಗೌಣವಾಗಿರುವುದು ಸುಳ್ಳಲ್ಲ ಎಂದುಅಭಿಪ್ರಾಯಪಟ್ಟರು.

ಎಂಐಟಿ ಪ್ರಾಧ್ಯಾಪಕ ಡಾ. ಪ್ರವೀಣ್ ಶೆಟ್ಟಿ ಅವರನ್ನು ಅಭಿನಂದಿಸಲಾುತು. ಸರ್ಟಿಫಿಕೇಟ್ ಕೋರ್ಸ್‌ನಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಭುವನಪ್ರಸಾದ್ ಹೆಗ್ಡೆ, ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ ಗೋಪಾಡಿ, ಕೃಷ್ಣಮೂರ್ತಿ ಭಟ್ ಬಗ್ವಾಡಿ, ಬಸವ ಮುಂಡಾಡಿ ಉಪಸ್ಥಿತರಿದ್ದರು.

ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಕೇಂದ್ರದ ಸಲಹಾ ಸಮಿತಿ ಸದಸ್ಯ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಸಲಹಾ ಸಮಿತಿ ಸದಸ್ಯ ಮಂಜುನಾಥ ಮಯ್ಯ ಸರ್ಟಿಫಿಕೇಟ್‌ಕೋರ್ಟ್‌ನಡಿ ತರಬೇತಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕ ಪ್ರೊ.ಕೆ. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಹಿಮ್ಮೇಳ ಪ್ರತಿಭೆ, ಸರ್ಟಿಫಿಕೇಟ್ ಕೋರ್ಸ್‌ನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದ ‘ಸಮರ ಸೌಗಂಧಿಕ’ ಯಕ್ಷಗಾನ ಪ್ರದರ್ಶನ ಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News