ಕೋಟ: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಪಾದಚಾರಿ ಮೃತ್ಯು
ಕೋಟ, ಮೇ 20: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 19ರಂದು ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಪಾದಾಚಾರಿಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರು, ಸಂಜೆ 6.45ರ ಸುಮಾರಿಗೆ ಕೋಟತಟ್ಟು ಗ್ರಾಮದ ಸಿರಿಧಾಮ ಹೋಟೇಲ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ನಿಂತಿದ್ದ ಸ್ಥಳೀಯ ನಿವಾಸಿ ಕೃಷ್ಣ ದೇವಾಡಿಗ (60) ಎಂಬವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೈಕ್, ಸಂಜೆ 7.35ರ ಸುಮಾರಿಗೆ ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪಾರಡೈಸ್ ಹೋಟೇಲ್ ಬಳಿ ರಸ್ತೆ ದಾಟಲು ನಿಂತುಕೊಂಡಿದ್ದ ರಾಘವೇಂದ್ರ ಉಪಾಧ್ಯಾಯ ಎಂಬವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಪರಿಣಾಮ ಬೈಕ್ ಸವಾರ ಭರತ್ ಹಾಗೂ ರಾಘವೇಂದ್ರ ಉಪಾಧ್ಯಾಯ ರಸ್ತೆಗೆ ಬಿದ್ದು ಗಾಯಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ರಾಘವೇಂದ್ರ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.