×
Ad

ಜೂ.30ರವರೆಗೆ ಉಡುಪಿ ನಗರಕ್ಕೆ ವಾರಾಹಿಯಿಂದ ನೀರು ಪೂರೈಕೆಗೆ ಅನುಮತಿ

ಹೆಚ್ಚುವರಿ 3 ತಿಂಗಳು ವಿಸ್ತರಿಸಲು ಪ್ರಯತ್ನ: ಪೌರಾಯುಕ್ತ ಮಹಾಂತೇಶ್

Update: 2026-05-20 22:19 IST

ಉಡುಪಿ, ಮೇ 20: ಪ್ರಸ್ತುತ ಉಡುಪಿ ನಗರಕ್ಕೆ ವಾರಾಹಿ ಕಾಲುವೆಯಿಂದ ನೀರು ಪೂರೈಕೆಯಾಗುತ್ತಿರುವುದರಿಂದ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಸದ್ಯ ಕಾಲುವೆಯಿಂದ ಜೂ.30ರವರೆಗೆ ಮಾತ್ರ ನೀರು ತೆಗೆಯಲು ಅನುಮತಿ ಇದ್ದು, ಅದನ್ನು ಮತ್ತೆ ಎರಡು ಮೂರು ತಿಂಗಳ ಕಾಲ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಸಂಘದ ‘ಸನ್ಮತಿ’ ಪತ್ರಿಕೆಯ ಏಪ್ರಿಲ್ ತಿಂಗಳ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಕಳೆದ ವರ್ಷ ಕೇವಲ ಸ್ವರ್ಣ ನದಿಯನ್ನು ಅವಲಂಬಿಸಿಕೊಂಡಿರುವುದ ರಿಂದ ನೀರಿನ ಸಮಸ್ಯೆ ಉಂಟಾಗಿತ್ತು. ಆದರೆ ಈ ಬಾರಿ ಜನವರಿಯಿಂದ ವಾರಾಹಿ ಕಾಲುವೆಯಿಂದ ನಗರಕ್ಕೆ ನೀರು ಪೂರೈಸುತ್ತಿದ್ದೇವೆ. ಕಾಲುವೆಯ ನೀರನ್ನು ಹಾಲಾಡಿ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ತರಿಸಿ, ಅಲ್ಲಿಂದ ಮಣಿಪಾಲಕ್ಕೆ ಪಂಪ್ ಮಾಡಲಾಗುತ್ತಿದೆ. ಇಲ್ಲಿಂದ ಇಡೀ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದೇವೆ. ಕಾಲುವೆಯಿಂದ ಜೂ.30ರವರೆಗೂ ನೀರು ತೆಗೆಯಲು ಅನುಮತಿ ದೊರೆತಿರುವುದರಿಂದ ಅಲ್ಲಿಯವರೆಗೆ ನಗರಕ್ಕೆ ನೀರಿನ ಸಮಸ್ಯೆ ಆಗುವುದಿಲ್ಲ ಎಂದರು.

ಜೂ.30ರಿಂದ ಸ್ವರ್ಣ ನದಿಯಿಂದ ನೀರನ್ನು ಪಂಪ್ ಮಾಡಿ ನಗರಕ್ಕೆ ಪೂರೈಕೆ ಮಾಡಲಾಗುತ್ತದೆ. ಸದ್ಯ ಬಜೆ ಡ್ಯಾಂನಲ್ಲಿ 2.4ಮೀಟರ್ ನೀರಿನ ಸಂಗ್ರಹ ಇದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಜೆಯಲ್ಲಿ ಒಳ ಹರಿವು ಆರಂಭವಾಗಿದೆ. ಆದುದರಿಂದ ಸ್ವರ್ಣನದಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಆದುದರಿಂದ ನಗರಸಭೆಯಿಂದ ಈ ವರ್ಷ ಯಾವುದೇ ರೇಷನಿಂಗ್ ಪದ್ಧತಿ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ವಾರಾಹಿ ಕಾಲುವೆಯಿಂದ ಪಂಪ್ ಮಾಡುವ 45 ಎಂಎಲ್‌ಡಿ ನೀರಿನಲ್ಲಿ 10 ಎಂಎಲ್‌ಡಿ ನೀರನ್ನು ಹಾಲಾಡಿಯಿಂದ ಮಣಿಪಾಲದವರೆಗಿನ ಮಾರ್ಗದಲ್ಲಿನ ಎಲ್ಲ ಗ್ರಾಪಂಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಉಳಿದ 35ಎಂಎಲ್‌ಡಿ ನೀರನ್ನು ನಗರಕ್ಕೆ ನೀಡಲಾಗುತ್ತಿದೆ. ಬಜೆ ಮತ್ತು ವಾರಾಹಿ ಕಾಲುವೆಯಿಂದ ನಾವು ಒಟ್ಟು 53ಗ್ರಾಮಗಳಿಗೆ ನೀರು ಒದಗಿಸುತ್ತಿದ್ದೇವೆ. ಹಾಗಾಗಿ ಈ ಬೇಸಿಗೆಯಲ್ಲಿ ಈ ಎಲ್ಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಅವರು ಹೇಳಿದರು.

40ಕಾರ್ಮಿಕರ ನಿಯೋಜನೆ

ನಗರಸಭೆಯಿಂದ ಮಳೆಗಾಲಕ್ಕೆ ಮುಜ್ರಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ತೋಡು ಹಾಗೂ ಚರಂಡಿಗಳಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಹೆಚ್ಚುವರಿಯಾಗಿ 40 ಕಾರ್ಮಿಕರನ್ನು ನಿಯೋಜಿಸಲಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳಿಂದ ರೋಗ ಬಾರದಂತೆ ತಡೆಯಲು ರಾಸಾಯನಿಕ ಸಿಂಪಡನೆ ಹಾಗೂ ಫಾಗಿಂಗ್ ಯಂತ್ರಗಳನ್ನು ಸಿದ್ಧಪಡಿಸಿಕೊಂಡು ಇರಿಸಲಾಗಿದೆ ಎಂದು ಪೌರಾಯುಕ್ತ ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ನಡೆದಿದ್ದು, ನಗರದ ಭಾಗದಲ್ಲಿ ಟೆಂಡರ್‌ನಲ್ಲಿನ ತ್ರಾಂತಿಕ ಸಮಸ್ಯೆಯಿಂದ ಶೇ.10-15 ಕಾಮಗಾರಿ ಬಾಕಿ ಇದೆ. ನಗರದ ನೆರೆ ಪೀಡಿತ ಪ್ರದೇಶಗಳಾದ ಬನ್ನಂಜೆ, ನಿಟ್ಟೂರು, ಗುಂಡಿಬೈಲು, ಮಠದಬೆಟ್ಟು ಪ್ರದೇಶಗಳಲ್ಲಿನ ತೋಡನ್ನು ಶುಚಿ ಗೊಳಿಸಿ ಹೂಳನ್ನು ತೆರವುಗೊಳಿಸ ಲಾಗಿದೆ ಇಲ್ಲಿ ಪ್ರವಾಹದಿಂದ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗಿದೆ ಎಂದರು.

30ಕೋಟಿ ಅನುದಾನದಲ್ಲಿ ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮುಂದಿನ ವರ್ಷ ಜೂನ್-ಜುಲೈನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅದರ ನಂತರ ಕೊಳಚೆ ನೀರಿನ ಯಾವುದೇ ಸಮಸ್ಯೆ ಇರುವುದಿಲ್ಲ. ಅದೇ ರೀತಿ ಈ ನೀರನ್ನು ಕೈಗಾರಿಕೆಗೆ ಬಳಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದರು.

ಕಸ ವಿಲೇವಾರಿಗೆ ಸಂಬಂಧಿಸಿ ಯಾವುದೇ ರೀತಿಯಲ್ಲೂ ದರ ಏರಿಕೆ ಮಾಡಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವ ವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ನಗರದಲ್ಲಿ 24 ಕಮ್ಯುನಿಟಿ ಮೊಬಿಲೈಸರ್‌ಗಳನ್ನು ನೇಮಕ ಮಾಡಲಾಗಿದ್ದು, ಇವರು ಈವರೆಗೆ ಒಟ್ಟು 4ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಅಕ್ರಮ ಕಟ್ಟಡಗಳಿಗೆ ನೋಟೀಸ್

ನಗರದಲ್ಲಿ 2024ರ ಸೆಪ್ಟಂಬರ್ ಹಿಂದಿನ ಅಕ್ರಮ ಕಟ್ಟಡಗಳಿಗೆ ಬಿ ಖಾತೆ ನೀಡಲು ಅವಕಾಶ ಇದ್ದು, ಅದರ ನಂತರದ ಅಕ್ರಮ ಕಟ್ಟಡಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಕಟ್ಟಡದ ಪಾರ್ಕಿಂಗ್ ಜಾಗಕ್ಕೆ ಡೋರ್ ನಂಬರ್ ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಪೌರಾಯುಕ್ತರು ಹೇಳಿದರು.

ಸಂಚಾರ ಸಮಸ್ಯೆಗೆ ತೊಂದರೆಯಾಗುವ ಗೂಡಂಗಡಿಗಳನ್ನು ತೆರವು ಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ನಗರದಲ್ಲಿ 57 ರಿಕ್ಷಾ ನಿಲ್ದಾಣಗಳ ಪೈಕಿ 48ಕ್ಕೆ ಅನುಮತಿ ಇದ್ದು, ಈ ಎಲ್ಲದಕ್ಕೂ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ನೀಡಲಾಗುತ್ತದೆ. ಮುಂದೆ ಯಾವುದೇ ಹೊಸ ನಿಲ್ದಾಣಕ್ಕೆ ಅನುಮತಿ ನೀಡುವುದಿಲ್ಲ. ಅನಧಿಕೃತವಾಗಿ ಸ್ಥಾಪಿಸಿದರೆ ತೆರವುಗೊಳಿಸಲಾಗು ವುದು ಎಂದರು.

ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ವಿಶ್ವೇಶರಯ್ಯ ವಾಣಿಜ್ಯ ಕಟ್ಟಡದ ಇದ್ದ ಜಾಗದಲ್ಲಿ ನಗರಸಭೆಯಿಂದ ಪಿಪಿಪಿ ಮಾದರಿಯಲ್ಲಿ ಬಹುಮಹಡಿಯ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಆದಷ್ಟು ಬೇಗ ಇದನ್ನು ಕಾರ್ಯಕರ್ತಗೊಳಿಸಲಾಗು ವುದು ಎಂದು ಪೌರಾಯುಕ್ತ ಮಹಾಂತೇಶ್ ಹಂಗರಗಿ ತಿಳಿಸಿದರು.

ನಗರಸಭೆ ಕಚೇರಿ ಎದುರಿನ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ತೊಡಲಾದ ಗುಂಡಿ ಮುಚ್ಚಲು 80ಲಕ್ಷ ರೂ. ಅಗತ್ಯ ಇದ್ದು, ಅದು ಸಾಧ್ಯವಾಗದೇ ಆರೋಗ್ಯ ಇಲಾಖೆಯವರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆ ಜಾಗದಲ್ಲಿ ನಗರಸಭೆಯಿಂದ ಬಹುಮಹಡಿ ಪಾರ್ಕಿಂಗ್ ಕಟ್ಟಡ ಇಂಗಿತ ವ್ಯಕ್ತಪಡಿಸಿದ್ದು, ಆದರೆ ಆ ಜಾಗವನ್ನು ಆಸ್ಪತ್ರೆ ಬಿಟ್ಟು ಬೇರೆ ಯಾವ ಉದ್ದೇಶಕ್ಕೂ ಬಳಸುವಂತಿಲ್ಲ ಎಂಬುದಾಗಿ ದಾನಪತ್ರದಲ್ಲಿ ಹೇಳ ಲಾಗಿದೆ ಎಂದರು.

ನಗರದ ಡೈಲಿ ಮಾರುಕಟ್ಟೆಯನ್ನು ಹಳೆ ಡಿಸಿ ಕಚೇರಿ ರಸ್ತೆಯಲ್ಲಿನ ಜಾಗಕ್ಕೆ ಸ್ಥಳಾಂತರಿಸಲು ಯೋಜನೆ ಮಾಡಲಾ ಗಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಂದ ಬ್ರಹ್ಮಗಿರಿ ಸರ್ಕಲ್‌ವರೆಗೆ 3.5ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಚಿಂತನೆ ಮಾಡಲಾಗಿದೆ. ಇಲ್ಲಿನ ಹಳೆಯ ಮರಗಳನ್ನು ಉಳಿಸಿಕೊಂಡೇ ಈ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News