ಸಂಶೋಧನೆ ಎಂಬುದು ಪದವಿಗೆ ಸೀಮಿತವಾಗಿರಬಾರದು: ಪ್ರೊ.ವಿವೇಕ ರೈ
ಪೊಳಲಿ ಶೀನಪ್ಪ ಹೆಗ್ಡೆ - ಎಸ್.ಆರ್.ಹೆಗ್ಡೆ ಪ್ರಶಸ್ತಿ ಪ್ರದಾನ
ಉಡುಪಿ, ಜೂ.20: ಇಂದು ಸಂಶೋಧನೆ ಎಂಬುದು ಕೇವಲ ಪದವಿಗೆ ಸೀಮಿತವಾಗಿರುತ್ತದೆ. ಒಮ್ಮೆ ತನ್ನ ಸಂಶೋಧನೆಗೆ ಪಿಎಚ್‌ಡಿ ಪದವಿ ಸಿಕ್ಕಿದ ಬಳಿಕ ಅವರು ಅದನ್ನು ಮರೆತು ಬಿಡುತ್ತಾರೆ. ಈ ಬಗ್ಗೆ ಏನನ್ನೂ ಬರೆಯು ವುದಿಲ್ಲ ಎಂದು ನಿವೃತ್ತ ಕುಲಪತಿ, ಜಾನಪದ ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ವಿಷಾಧಿಸಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಚೇಳಾರು ಗುತ್ತು ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ಮಂಗಳೂರಿನ ಡಾ.ಬಿ.ಶಿವರಾಮ ಶೆಟ್ಟಿ ಇವರಿಗೆ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್.ಹೆಗ್ಡೆ ಪ್ರಶಸ್ತಿ-2026ನ್ನು ಪ್ರದಾನ ಮಾಡಿ ಅವರು ಮಾತನಾಡುತಿದ್ದರು.
ಇಂದು ಸಂಶೋಧನೆಗೆ ಆಸಕ್ತಿಯೊಂದಿಗೆ ಬರುವವರ ಸಂಖ್ಯೆ ತೀರಾ ಕಡಿಮೆ ಯಾಗಿದೆ. ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಸಂಶೋಧನೆಗೆ ಈಗಲೂ ವಿಪುಲ ಅವಕಾಶಗಳಿವೆ. ಪ್ರಾದೇಶಿಕ ಸಂಸ್ಕೃತಿಯ ಬಗ್ಗೆ, ದೇಶೀಯ ವಿದ್ವತ್ತಿನ ಬಗ್ಗೆ ಇಂದಿನ ದೃಷ್ಟಿಯಲ್ಲಿ ಮರು ವಿಮರ್ಶೆ ನಡೆಸಲು ಸಾಧ್ಯವಿದೆ ಎಂದವರು ಹೇಳಿದರು.
ಪೊಳಲಿ ಶೀನಪ್ಪ ಹೆಗ್ಡೆ ಅವರು ತುಳು ಚಳವಳಿಯ ಭಾಗವಾಗಿದ್ದವರು. ಅವರ ಬದುಕು ಮತ್ತು ಬರಹಗಳು ಎಂದೂ ಮಾದರಿಯಾಗಿರುವಂತದ್ದು. ಸ್ವಾತಂತ್ರ್ಯಪೂರ್ವದಿಂದಲೇ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದವರು. ಆ ಸಂದರ್ಭದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನ ಕಾರರಿಗೆ ದಾರಿದೀಪವಾಗಿದ್ದಾರೆ. ಗದ್ಯರೂಪದಲ್ಲಿ ತುಳುನಾಡಿನ ಜನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ದನದ ಕಥೆಗಳನ್ನು ಸಂಗ್ರಸಿ ಜಾನಪದ ಅದ್ಯಯನಕಾರರಿಗೆ ಮಾರ್ಗದರ್ಶಿ ಸೂತ್ರವನ್ನುನೀಡಿದ್ದಾರೆ ಎಂದು ಡಾ.ವಿವೇಕ ರೈ ವಿವರಿಸಿದರು.
ಈ ಬಾರಿಯ ಪೊಳಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮಂಗಳೂರಿ ನ ಹಿರಿಯ ಲೇಖಕ, ಸಂಶೋಧಕ ಡಾ.ಬಿ. ಶಿವರಾಮ ಶೆಟ್ಟಿ ಅವರು ‘ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.
ಸಂಶೋಧನೆ ಎಂಬುದು ಸತ್ಯದ ಸಾಕ್ಷಾತ್ಕಾರ. ಸಂಶೋಧನೆ ಎಂದರೆ ಹೊಸತನ್ನು ಹೇಳುವುದು. ಇಲ್ಲದ್ದನ್ನೂ ಹೇಳುವುದಲ್ಲ, ಇರುವುದನ್ನು ಹೇಳುವುದು. ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ಶಿಷ್ಟ ಸತ್ಯ. ಈ ಬಗೆಯ ಸತ್ಯದ ಹೊಳಹು ಕಾಲಾತೀತವಾಗಿರುತ್ತದೆ. ಅವುಗಳಿಂದ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.
ತುಳುನಾಡಿನ ಮಾತೃಪ್ರಧಾನ ಸಮಾಜದ ಅಳಿಯಸಂತಾನ ಕಟ್ಟಿನ ಪರಂಪರೆಯನ್ನು ವೈಭವೀಕರಿಸುವ ಪ್ರಯತ್ನ ನಡೆಯುತಿದ್ದು, ಇದರ ಬಗ್ಗೆ ಮರು ಪರಿಶೀಲನೆ ನಡೆಯಬೇಕಾದ ಅಗತ್ಯವಿದೆ. ಇದು ಹೆಣ್ಣಿಗೆ ಪ್ರಾಧಾನ್ಯತೆಯನ್ನು ಕೊಡುವ ಕುಟುಂಬ ಪದ್ಧತಿ. ಆಸ್ತಿಯನ್ನು ಕುಟುಂಬದಲ್ಲಿ ನಿರಂತರವಾಗಿ ಉಳಿಸಿಕೊಳ್ಳುವ ಉದ್ದೇಶ ಇದರಲ್ಲಿ ಕಾಣಬಹುದು ಎಂದರು.
ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಚೇತನ್ ಮುಂಡಾಜೆ ಅವರು ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.ಪ್ರಶಸ್ತಿಯ ಪ್ರಾಯೋಜಕರಾದ ಚೇಳಾರುಗುತ್ತು ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್.ಸಿಯ ಸಹಸಂಶೋಧಕ ಡಾ.ಅರುಣ್‌ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.