ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಯುವಕ ಮೃತ್ಯು
Update: 2026-06-20 20:40 IST
ಕೋಟ, ಜೂ.20: ಸಮುದ್ರದ ನೀರಿನಲ್ಲಿ ಮುಳುಗಿ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ಕೋಡಿ ಹೊಸಬೆಂಗ್ರೆ ಬೀಚ್‌ನಲ್ಲಿ ಜೂ.19ರಂದು ಬೆಳಗ್ಗೆ ನಡೆದಿದೆ.
ಮೃತಪನ್ನು ಬೆಂಗಳೂರಿನ ನಿಖಿಲ್ ಕುಮಾರ್ ಎಂ.(31) ಎಂದು ಗುರುತಿಸಲಾಗಿದೆ. ಜೂ.18ರಂದು ಇವರು ತನ್ನ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಪ್ರವಾಸದ ನಿಮಿತ್ತ ಉಡುಪಿಗೆ ಬಂದು ಕೋಡಿ ಹೊಸಬೆಂಗ್ರೆಯ ಹೋಂ ಸ್ಟೇಯಲ್ಲಿ ಉಳಿದುಕೊಂಡಿದ್ದರು.
ಜೂ.19ರಂದು ಬೆಳಗ್ಗೆ ಹೊಸಬೆಂಗ್ರೆಯ ಬೀಚಿನ ನೀರಿನಲ್ಲಿ ಎಲ್ಲರೂ ಆಟ ಆಡಲು ತೆರಳಿದ್ದು ಆ ವೇಳೆ ನಿಖಿಲ್ ಕುಮಾರ್ ನೀರಿನಲ್ಲಿ ಬಹಳ ಮುಂದೆ ತೆರಳಿದರು. ಆಗ ಸಮುದ್ರದ ನೀರಿನ ಮಟ್ಟ ಜಾಸ್ತಿಯಾಗಿ ಈಜಲು ಆಗದೇ ನಿಖಿಲ್ ಕುಮಾರ್ ಅಸ್ವಸ್ಥಗೊಂಡು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.