ನಗರಸಭಾ ವ್ಯಾಪ್ತಿಯಲ್ಲಿ ರೋಗ ನಿಯಂತ್ರಣ ಅರಿವು ಕಾರ್ಯಾಗಾರ
ಉಡುಪಿ, ಜೂ.20: ಉಡುಪಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಗಳ ಜಂಟಿ ಆಶ್ರಯದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಸೂಕ್ತ ಕ್ರಮದ ಕುರಿತು ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಸಿಬಂದ್ದಿಗಳು ಹಾಗೂ ಕಾರ್ಮಿಕರನ್ನು ನೇಮಿಸಿ ಕೊಂಡ ಕಟ್ಟಡ ಮಾಲಕರಿಗೆ ರೋಗ ನಿಯಂತ್ರಣಕ್ಕೆ ಅರಿವು ಮೂಡಿಸುವ ಕಾರ್ಯಗಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಕಾರ್ಯಗಾರದಲ್ಲಿ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಲು ಕೈಗೊಳ್ಳಬೇಕಾದ ಸೂಕ್ತ ಕ್ರಮದ ಕುರಿತು ಮಾಹಿತಿ ನೀಡಿ, ಮಲೇರಿಯಾ, ಡೆಂಗಿ ಮುಂತಾದ ಸಾಂಕ್ರಮಿಕ ರೋಗಗಳು ಜುಲೈನಿಂದ ನವೆಂಬರ್ ವರೆಗೆ 5 ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತದೆ. ಜಿಲ್ಲೆಯನ್ನು ಸ್ವಚ್ಛ ಮತ್ತು ಆರೋಗ್ಯಕರ ವಾಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮನೆಗಳ ಸುತ್ತಮುತ್ತ, ಕಟ್ಟಡ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ, ತಮ್ಮ ಪರಿಸರದಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕಟ್ಟಡ ಕಾಮಗಾರಿ, ಲೇಬರ್ ಶೆಡ್‌ಗಳ ಪರಿಸರದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇಂತಹ ಪರಿಸರದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕು ಎಂದರು.
ಇಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಕೇವಲ ಇಲ್ಲಿನ ಕಾರ್ಮಿಕರನ್ನು ಮಾತ್ರವಲ್ಲದೇ ಇತರರನ್ನೂ ಬಾಧಿಸುತ್ತದೆ. ಆದ್ದರಿಂದ ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬರುವ ವಲಸೆ ರ್ಕಾುಕರಿಕರಿಗೆ ಕಡ್ಡಾಯವಾಗಿ ರಕ್ತ ಪರೀಕ್ಷೆ ನಡೆಸಬೇಕು ಹಾಗೂ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.
ಕೀಟ ಶಾಸ್ತ್ರಜ್ಞೆ ಮುಕ್ತಾ ಅವರು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಜೊತೆಗೆ ನಮ್ಮ ಆರೋಗ್ಯದ ಅಭಿವೃದ್ಧಿ ಬಗ್ಗೆಯೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮಲೇರಿಯಾ, ಡೆಂಗಿ, ಚಿಕನ್ ಗುನ್ಯಾ, ಫೈಲೇರಿಯಾ, ಮೆದುಳು ಜ್ವರ ಮುಂತಾದ ಸಾಂಕ್ರಮಿಕ ರೋಗಗಳು ಸೊಳ್ಳೆಗಳ ಕಡಿತದಿಂದಲೇ ಬರುತ್ತವೆ. ಸೊಳ್ಳೆಗಳ ಗಾತ್ರ ಸಣ್ಣದಾಗಿದ್ದರೂ ಅದರ ಕಡಿತ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಇದು ಮಾರಣಾಂತಿಕ ಕಾಯಿಲೆಯನ್ನು ಸಹ ತರಬಲ್ಲದು. ತಲೆನೋವು, ಜ್ವರ, ವಾಂತಿ ಮುಂತಾದ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಇಲಿ ಜ್ವರದ ಬಗ್ಗೆ ಸಮಗ್ರ ಮಾಹಿತಿ ನೀಡಿ, ಇಲಿಜ್ವರವು ಇಲಿಯ ಮೂತ್ರಗಳು ನೀರಿನಲ್ಲಿ ಸೇರಿ ಆ ನೀರನ್ನು ಬರಿಗಾಲಲ್ಲಿ ತುಳಿಯುವುದರಿಂದ ರೋಗ ಹರಡುತ್ತದೆ. ಆದ್ದರಿಂದ ಯಾರೂ ಬರೀ ಕಾಲಿನಲ್ಲಿ ನಡೆಯದಂತೆ ಸೂಚನೆ ನೀಡಿದರು.
ನೊಣಗಳು ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುವುದರಿಂದ ಸ್ವಚ್ಛತೆ ಇಲ್ಲದ ಕಡೆ ನೊಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇವುಗಳೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ನೊಣಗಳ ಬಗ್ಗೆಯೂ ಜಾಗೃತೆ ವಹಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಸಾರ್ವಜನಿಕರು ತ್ಯಾಜ್ಯವನ್ನು ನಗರಸಭಾ ವಾಹನಕ್ಕೆ ನೀಡುವಾಗ ವಿಂಗಡಣೆ ಮಾಡಿಯೇ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಡುಪಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು, ನಗರಸಭೆಯ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನಗರಸಭೆ ಅಧಿಕಾರಿಗಳು, ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್ ಪ್ರಭು ನಿರೂಪಿಸಿ ವಂದಿಸಿದರು.