×
Ad

ಕುಂದಾಪುರ: ಸರ್ವೀಸ್ ರಸ್ತೆಯಿಂದ ಹೆದ್ದಾರಿ ದಾಟದಿರಲು ರಕ್ಷಣಾ ಬೇಲಿ ಅಳವಡಿಕೆಗೆ ಆಗ್ರಹ

Update: 2026-06-20 20:37 IST

ಕುಂದಾಪುರ, ಜೂ.20: ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಕೋಡಿ ಜಂಕ್ಷನ್(ಹಿಂದಿನ ವಿನಾಯಕ ಚಿತ್ರಮಂದಿರದ ಸಮೀಪ)ನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಜಂಕ್ಷನ್‌ನ ಎರಡೂ ಕಡೆ ಯಿಂದಲೂ ಸುಮಾರು 60 ಮೀಟರ್‌ನಷ್ಟು ರಕ್ಷಣಾ ತಡೆಬೇಲಿ ಅಳವಡಿಸದಿರುವ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಳೆದ ಕೆಲ ವರ್ಷಗಳಿಂದ ಇಲ್ಲಿ 20ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು, 5ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇಲ್ಲಿ ಏಕಾಏಕಿ ಪಾದಚಾರಿಗಳು ಹೆದ್ದಾರಿ ದಾಟದಂತೆ ಸೂಕ್ತವಾದ ತಡೆಬೇಲಿ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಮಸ್ಯೆಯೇನು?: ಇಲ್ಲಿನ ಕುಂದಾಪುರ ಕಡೆಗೆ ಹಾಗೂ ಉಡುಪಿ ಕಡೆಗೆ ತೆರಳುವ ಎರಡೂ ಬದಿಯ ಹೆದ್ದಾರಿಯ ಸುಮಾರು 60 ಮೀಟರ್‌ನಷ್ಟು ದೂರದವರೆಗೆ ತಡೆಬೇಲಿ ಇಲ್ಲದೇ ಇರುವುದರಿಂದ ಇಲ್ಲಿ ಜನರು ಏಕಾಏಕಿ ಹೆದ್ದಾರಿ ದಾಟುತ್ತಾರೆ.

ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನ ಗಳಿಗೆ ಜನ ಹೆದ್ದಾರಿ ದಾಟುವುದು ಕಾಣುತ್ತಿಲ್ಲ. ಹಾಗಾಗಿ ಅಪಘಾತಗಳು ಆಗುತ್ತಿವೆ. ಅದಕ್ಕಾಗಿ ಇಲ್ಲಿ ಬಾಕಿ ಇರುವ 60ಮೀ. ನಷ್ಟು ದೂರ ತಡೆಬೇಲಿ ಅಳವಡಿಸಿದರೆ ಏಕಾಏಕಿ ಹೆದ್ದಾರಿ ದಾಟುವುದು ತಪ್ಪುತ್ತದೆ. ಅಪಘಾತಗಳಿಗೂ ಕಡಿವಾಣ ಬೀಳುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಸುಮಾರು 60ಮೀ. ದೂರದವರೆಗೆ ಶೀಘ್ರ ತಡೆಬೇಲಿ ಅಳವಡಿಸ ಬೇಕಾಗಿದೆ. ಸಾರ್ವಜನಿಕರು ಹೆದ್ದಾರಿಗೆ ಏಕಾಏಕಿ ಪ್ರವೇಶಿಸದಂತೆ ತಡೆಗೋಡೆ ನಿರ್ಮಿಸದ ಕಾರಣ ಹಲವಾರು ಅಪಘಾತ ಸಂಭವಿಸಿದೆ. ಅನೇಕ ಮಂದಿ ಸಾವನ್ನಪ್ಪಿ ದ್ದಾರೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಡೆಗೋಡೆಯನ್ನು ನಿರ್ಮಿಸಿ ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕಾಗಿದೆ. ಈ ಬಗ್ಗೆ ಈಗಾಗಲೇ ಶಾಸಕರು ಹಾಗೂ ಸಂಸದರಿಗೆ ವಿಚಾರ ತಿಳಿಸಿದ್ದು, ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇರಿಕುದ್ರುವಿನ ಸುನೀಲ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

‘ನಿರಂತರವಾಗಿ ಅಪಘಾತ ನಡೆಯುತ್ತಿರುವ ಈ ಪ್ರದೇಶದಲ್ಲಿ ತಡೆಬೇಲಿ ಅಳವಡಿಸುವಂತೆ ಅನೇಕ ಬಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ. ಹೆದ್ದಾರಿ ಎಂನಿಯರ್ಗೆ, ಸಂಚಾರ ಪೊಲೀಸ್ ಠಾಣೆಗೂ ಮನವಿ ಕೊಟ್ಟಿದ್ದೇವೆ. 15 ದಿನದೊಳಗೆ ಅಳವಡಿಸದಿದ್ದರೆ ಜನರೆಲ್ಲ ಒಟ್ಟಾಗಿ ಪ್ರತಿಭಟನೆ ನಡೆಸಲಾಗುವುದು’

-ಮಹೇಶ್ ಶೆಣೈ ಕುಂಭಾಶಿ, ರಿಕ್ಷಾ ಚಾಲಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News