ಉಡುಪಿ| ರೌಡಿಶೀಟರ್ ಚರಣ್ ರಾಜ್ ಗೂಂಡಾ ಕಾಯ್ದೆಯಡಿ ಬಂಧನ
ಉಡುಪಿ, ಜೂ.24: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಚರಣ್ ರಾಜ್ (29) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ವರದಿಯ ಮೇರೆಗೆ ಜಿಲ್ಲಾ ದಂಡಾಧಿಕಾರಿಯಾದ ಜಿಲ್ಲಾಧಿಕಾರಿ ಜೂ.24ರಂದು ಈ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಕುಮ್ದೇಲ್ ನಿವಾಸಿಯಾಗಿರುವ ಚರಣ್ ರಾಜ್ ವಿರುದ್ಧ ಬಂಟ್ವಾಳ ಗ್ರಾಮಾಂತರ, ಸುರತ್ಕಲ್, ಮಂಗಳೂರು ಪೂರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ, ಅಕ್ರಮ ಕೂಟ, ಮಹಿಳೆಯರ ಮೇಲೆ ದೌರ್ಜನ್ಯ, ಮಾದಕ ದ್ರವ್ಯ ಸೇವನೆ, ಮಾದಕ ದ್ರವ್ಯ ಸಾಗಾಟ, ಎಸ್.ಸಿ./ಎಸ್.ಟಿ. ಕಾಯ್ದೆ ಸಹಿತ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ಇವುಗಳ ಪೈಕಿ 3 ಪ್ರಕರಣಗಳಲ್ಲಿ ಶಿಕ್ಷೆ, 2 ಪ್ರಕರಣಗಳ್ಲಿ ಖುಲಾಸೆ, 4 ಪ್ರಕರಣ ನ್ಯಾಯಾಂಗ ವಿಚಾರಣೆ ಹಾಗೂ ಉಳಿದ 1 ಪ್ರಕರಣ ತನಿಖೆಯಲ್ಲಿವೆ. ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.