×
Ad

ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ ಶೇ.55.49 ಗಣತಿ ನಮೂನೆ ವಿತರಣೆ

ಸೆಕ್ಟರ್ ಆಫೀಸರ್ಸ್‌, ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿಗಳಿಂದ ಸಭೆ

Update: 2026-07-06 21:08 IST

ಉಡುಪಿ : ಎರಡು ದಿನದೊಳಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್- 2026) ಪ್ರಕ್ರಿಯೆಯ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಮತದಾರರಿಗೆ ವಿತರಿಸುವಂತೆ ಚುನಾವಣಾ ಆಯೋಗದಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಧಾವಂತದಲ್ಲಿ ಮನೆ ಮನೆಗೆ ಭೇಟಿ ನೀಡಿ ಅರ್ಜಿಗಳನ್ನು ವಿತರಿಸಿ ಏದುಸಿರುವ ಬಿಡುತ್ತಿದ್ದಾರೆ.

ಜುಲೈ 6ರ ಸೋಮವಾರದವರೆಗೆ ಉಡುಪಿ ಜಿಲ್ಲೆಯಲ್ಲಿ ವಿತರಿಸಬೇಕಾದ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳಲ್ಲಿ 5,90,349 ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸಿ, ಶೇ.55.49ರಷ್ಟು ಪ್ರಗತಿಯನ್ನು ದಾಖಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 33620 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜಿಲ್ಲೆಯಲ್ಲಿ 195 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ 92 ಮಂದಿ ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

ಜಿಲ್ಲೆಯಲ್ಲಿ ಈಗಾಗಲೇ 34 ಮಂದಿ ಮತದಾರರು ತಮ್ಮ ದಾಖಲಾತಿಯನ್ನು ಮಾಡಿದ್ದಾರೆ. ಗಣತಿಗೆ ಸಿಗದವರು ಐವರು ಇದ್ದು, ವಲಸೆ ಮತದಾರರು ಐವರು ಕಂಡುಬಂದಿದ್ದಾರೆ ಎಂದು ಮಾಹಿತಿ ತಿಳಿಸಿದೆ.

ಜಿಲ್ಲೆಯಲ್ಲಿ ಜು.6ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ ಹೀಗಿದೆ:

ವಿಧಾನಸಭಾಕ್ಷೇತ್ರ         -         ಒಟ್ಟು ಮತದಾರರು     -        ವಿತರಿಸಿದ ನಮೂನೆ

118.ಬೈಂದೂರು           -          2,41,863             -            1,26,733

119.ಕುಂದಾಪುರ          -           2,12,473            -             1,26,653

120.ಉಡುಪಿ               -             2,21,680          -                1,11,477

121.ಕಾಪು                 -              1,94,718            -              1,08,949

122.ಕಾರ್ಕಳ             -              1,93,142             -               1,16,537

ಒಟ್ಟು                      -                10,63,876            -                5,90,349

ಅಧಿಕಾರಿಗಳಿಗೆ ಸಭೆ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಇಂದು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(ಎಸ್‌ಐಆರ್-2026) ಕಾರ್ಯದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಹೊಸದಾಗಿ ನಿಯುಕ್ತಿಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು (ಬಿಎಲ್‌ಓ ಸುಪರ್‌ವೈಸರ್) ಭಾಗವಹಿಸಿದ್ದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲಿಲ ವಲಯ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ಸಮಗ್ರ ತರಬೇತಿ ನೀಡಿದರು.

ಬಿಎಲ್‌ಒ ಸೂಪರ್‌ವೈಸರ್‌ಗಳೊಂದಿಗೆ ನೇರ ಸಂವಾದ ನಡೆಸಿ ಫೀಲ್ಡ್ ಮಟ್ಟದಲ್ಲಿ ಅವರು ಎದುರಿಸುತ್ತಿರುವ ತಾಂತ್ರಿಕ ತೊಂದರೆಗಳು, ಮನೆ ಭೇಟಿಯ ಸವಾಲುಗಳು ಹಾಗೂ ದತ್ತಾಂಶ ನಮೂದನೆಯಲ್ಲಿ ಉಂಟಾಗುವ ಅಡಚಣೆಗಳ ಕುರಿತಂತೆ ಚರ್ಚಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾಪು ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣಾ ನೊಂದಣಿ ಅಧಿಕಾರಿ (ಇಆರ್‌ಒ) ಅಧ್ಯಕ್ಷತೆಯಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News