ರಾಮಮಂದಿರ ಹಗರಣ ಬಿಜೆಪಿಯಿಂದ ಭಕ್ತರ ನಂಬಿಕೆಗೆ ದ್ರೋಹ: ಭಾಸ್ಕರ ರಾವ್ ಕಿದಿಯೂರು
ಉಡುಪಿ, ಜು.9: ರಾಮ ಮಂದಿರ ಹೆಸರಲ್ಲಿ ಕಳೆದ 5 ವರ್ಷಗಳಲ್ಲಿ 500 ಕೋಟಿ ಲೂಟಿಯಾಗಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ ಹಾಗೂ ಅನಿಲ್ ಮಿಶ್ರಾ ರನ್ನು ಟ್ರಸ್ಟ್‌ನಿಂದ ಹೊರ ದಬ್ಬಲಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್‌ನ್ನು ವಿಸರ್ಜಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದೆ ಹೋದಲ್ಲಿ ಮಂದಿರ ನಿರ್ಮಾಣಗಳು ಹಣ ಲೂಟಿಯ ಕೇಂದ್ರಗಳಾಗುವ ಸಾಧ್ಯತೆಗಳಿವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.
ರಾಮ ಮಂದಿರಕ್ಕೆ ಭಕ್ತರು ನೀಡಿದ ಆಭರಣಗಳ ಸಂಪೂರ್ಣ ಮಾಹಿತಿ ಲಭ್ಯವಿಲ್ಲ. ಮಂದಿರದಲ್ಲಿ ನಡೆಯುವ ಯಾವುದೇ ಅವ್ಯವಹಾರಗಳು ಸೋರಿಕೆಯಾಗಿ ಭಕ್ತರಿಗೆ ಮಾಹಿತಿ ದೊರಕಬಾರದು ಎಂಬ ಹಿನ್ನಲೆಯಲ್ಲಿ ಮಾಹಿತಿ ಹಕ್ಕಿನ ಕಾಯ್ದೆಯ ವ್ಯಾಪ್ತಿಯಿಂದ ರಾಮಮಂದಿರವನ್ನು ಹೊರಗಿಡ ಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದು ಹಾಕಲಾಗಿದೆ. ಕಳಪೆ ಕಾಮ ಗಾರಿಯಿಂದಾಗಿ ಮಂದಿರದ ಕಟ್ಟಡದಲ್ಲಿ ಬಿರುಕು ಕಂಡುಬಂದಿದೆ ಎಂಬ ಆರೋಪ ಕೇಳಿಬಂದಿದೆ.
ಈ ಎಲ್ಲ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಾದರೆ ಟ್ರಸ್ಟ್‌ನ್ನು ಸಂಪೂರ್ಣ ವಿಸರ್ಜನೆಮಾಡಿ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಶ್ರೀರಾಮನ ಪ್ರಾಣ ಪ್ರತಿಷ್ಠೆ ಮಾಡಿ ಟ್ರಸ್ಟ್ ಸದಸ್ಯರನ್ನು ಆಯ್ಕೆಮಾಡಿದ ಪ್ರಧಾನಿಗಳ ಗಾಢಮೌನ ವ್ಯವಸ್ಥೆಯಲ್ಲಿನ ಲೋಪವನ್ನು ಒಪ್ಪಿಕೊಂಡಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.