ರಸ್ತೆಗುರುಳಿದ ಮರಗಳು: ಬಾಳೆಬರೆ ಘಾಟಿಯಲ್ಲಿ ಸಂಚಾರಕ್ಕೆ ಅಡ್ಡಿ
► ಅರಣ್ಯ ಇಲಾಖೆಯಿಂದ ಕ್ಷಿಪ್ರ ಕಾರ್ಯಾಚರಣೆ; ಮರಗಳ ತೆರವು
ಕುಂದಾಪುರ, ಜು.9: ಬುಧವಾರ ತಡರಾತ್ರಿ ಹಾಗೂ ಮುಂಜಾನೆ ವೇಳೆ ಬೀಸಿದ ಭಾರೀ ಗಾಳಿ ಮತ್ತು ಮಳೆ ಯಿಂದಾಗಿ ಉಡುಪಿ ಜಿಲ್ಲೆಯ ವಿವಿದೆಡೆಯಿಂದ ತೀರ್ಥಹಳ್ಳಿ-ಶಿವಮೊಗ್ಗ, ಹೊಸನಗರ ಸಂಪರ್ಕಿಸುವ ಬಾಳೆಬರೆ (ಹುಲಿಕಲ್) ಘಾಟಿಯ ಮುಖ್ಯ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.
ಸುಮಾರು ಐದಾರು ಬ್ರಹತ್ ಗಾತ್ರದ ಮರಗಳು ರಸ್ತೆ ಮೇಲೆ ಬಿದ್ದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಆತಂಕವಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಸಿದ್ದಾಪುರ ವನ್ಯಜೀವಿ ವಿಭಾಗದವರು ಮರಗಳನ್ನು ಕಟಾವು ಮಾಡಿ ಕೆಲವೇ ಹೊತ್ತಿನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಹೊಸಂಗಡಿಯಿಂದ ಮಾಸ್ತಿಕಟ್ಟೆ ಸಮೀಪದ ಚಂಡಿಕಾಂಬ ದೇವಸ್ಥಾನದವರೆಗೂ ಮರಗಳು ಬಿದ್ದು ಸಮಸ್ಯೆಯಾಗುವ ಸಾಧ್ಯತೆಗಳಿತ್ತು. ಸಿದ್ದಾಪುರ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಜಿ.ವಿ. ನಾಯ್ಕ್, ಉಪವಲಯ ಅರಣ್ಯಾಧಿಕಾರಿಗಳಾದ ಗುರುರಾಜ್, ಶರತ್, ರವೀಂದ್ರ, ರವಿ, ಶಶಿಕಾಂತ್, ನಾಗರಾಜ್ ಹಾಗೂ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ಯಲ್ಲಿದ್ದರು.
ಜಾನುವಾರ ಮೇಲೆ ಬಿದ್ದ ಮರ: ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಗಣೇಶ ಜೋಗಿ ಎಂಬವರಿಗೆ ಸೇರಿದ ದನ ವೊಂದರ ಮೇಲೆ ಮರವೊಂದು ಬಿದ್ದು, ಜಾನುವಾರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಕಾಪು ತಹಶೀಲ್ದಾರರು ತಿಳಿಸಿದ್ದಾರೆ. ಇದರಿಂದ 30,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಉಳಿದಂತೆ ಕುಂದಾಪುರ ತಾಲೂಕು ಮರವಂತೆ ಗ್ರಾಮದಲ್ಲಿ ಅನುಸೂಯ ಶೆಣೈ ಎಂಬವರ ಮನೆ ಮೇಲೆ ಮರ ಬಿದ್ದು, ವಾಸ್ತವ್ಯದ ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ 50,000ಕ್ಕೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಆರೆಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸುತಿದ್ದರೂ, ಬಿದ್ದ ಮಳೆಯ ಪ್ರಮಾಣ ಮಾತ್ರ 30-40ಮಿ.ಮೀ.ನ್ನು ಮೀರುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಇಂದು ಸಹ ಇಡೀ ದಿನ ಒಳ್ಳೆಯ ಬಿಸಿಲಿತ್ತು. ಮಳೆಯ ಹನಿ ಬೀಳಲಿಲ್ಲ.
21.6ಮಿ.ಮೀ. ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 21.6ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 33.8ಮಿ.ಮೀ. ಮಳೆಯಾದರೆ, ಕಾರ್ಕಳದಲ್ಲಿ 28.0ಮಿ.ಮೀ., ಬೈಂದೂರಿನಲ್ಲಿ 21.7, ಕುಂದಾಪುರದಲ್ಲಿ 20.5, ಕಾಪು 18.3, ಬ್ರಹ್ಮಾವರ 11.4 ಹಾಗೂ ಉಡುಪಿಯಲ್ಲಿ 8.0ಮಿ.ಮೀ. ಮಳೆಯಾದ ವರದಿ ಬಂದಿದೆ.