×
Ad

ಬರವಣಿಗೆ ಮೂಲಕ ಸಮಾಜದ ಧ್ವನಿಯಾಗಲು ಸಾಧ್ಯ: ಸೋಮಶೇಖರ್ ಪಡುಕರೆ

Update: 2026-07-09 19:16 IST

ಬ್ರಹ್ಮಾವರ, ಜು.9: ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮತ್ತು ಶಿಸ್ತು ಇರಬೇಕು. ನನಗೆ ದೊಡ್ಡ ಭಾಷಣ ಮಾಡಲು ಬರದಿದ್ದರೂ, ಬರವಣಿಗೆಯ ಮೂಲಕ ಸಮಾಜದ ಧ್ವನಿಯಾಗಲು ಸಾಧ್ಯವಿದೆ. ಪತ್ರಕರ್ತರಷ್ಟೇ ಅಲ್ಲದೆ, ವಿದ್ಯಾರ್ಥಿಗಳೂ ಸಮಾಜದ ಕುಂದುಕೊರತೆಗಳಿಗೆ ಸ್ಪಂದಿಸುವ ನಾಗರಿಕ ಪತ್ರಕರ್ತರಾಗಿ ಕೆಲಸ ಮಾಡ ಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸೋಮ ಶೇಖರ್ ಪಡುಕೆರೆ ಹೇಳಿದ್ದಾರೆ.

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪತ್ರಿಕಾ ದಿನದ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಮಾಧ್ಯಮ ಸಂಸ್ಥೆಗಳು ಅಸ್ತಿತ್ವ ಉಳಿಸಿಕೊಳ್ಳಲು ರಾಜಿ ಮಾಡಿಕೊಳ್ಳುತ್ತಿರುವ ಇಂದಿನ ಆತಂಕದ ಸ್ಥಿತಿಯಲ್ಲೂ ತಾವು ಕ್ರೀಡಾ ಪತ್ರಿಕೋದ್ಯಮದಲ್ಲಿ ಮುಕ್ತವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದರು. ವಿದ್ಯಾರ್ಥಿಗಳು ಮುಂಜಾನೆ ಬೇಗ ಎದ್ದು ಓಟ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಷ್ಟೇ ಮಹತ್ವದ ಪಾತ್ರವನ್ನು ನಾಲ್ಕನೇ ಅಂಗವಾದ ಪತ್ರಿಕೋದ್ಯಮ ರಂಗ ನಿರ್ವಹಿಸುತ್ತಿದೆ. ಇಂದಿನ ಸುಳ್ಳು ಸುದ್ದಿಗಳ ಸುಳಿಯ ನಡುವೆ ಸಾರ್ವಜನಿಕರಿಗೆ ನೈಜ ಮತ್ತು ವಿಶ್ವಾಸಾರ್ಹ ಸುದ್ದಿಯನ್ನು ತಲುಪಿಸುವುದೇ ಪತ್ರಕರ್ತರ ಮುಂದಿರುವ ದೊಡ್ಡ ಸವಾಲಾಗಿದೆ ಎಂದರು.

ಸುಜ್ಞಾನ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಗಾಣಿಗ ಅಚ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಸಮಿತಿ ಸದಸ್ಯ ಮೋಹನ ಉಡುಪ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಬೀಜಾಡಿ ಸನ್ಮಾನ ಪತ್ರವನ್ನು ವಾಚಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News