ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ; ದೂರು ದಾಖಲು
ಉಡುಪಿ, ಜು.9: ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾ ಗುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿವೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಅಶೋಕ್ ಸ್ಪಷ್ಟಿಕರಣ ನೀಡಿದ್ದಾರೆ.
ಜು.7ರಂದು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ಯಾವುದೆ ದಾಖಲಾತಿ ಅಥವಾ ರಶೀದಿ ಇಲ್ಲದೆ ರಕ್ತವನ್ನು ಖಾಸಗಿ ಆಸ್ಪತ್ರೆಗೆ ವಿತರಿಸಿದೆ. ಒಂದೇ ಬಾರಿಗೆ 15 ಯುನೀಟ್ ರಕ್ತವನ್ನ ಖಾಸಗಿ ಆಸ್ಪತ್ರಗೆ ನೀಡಲಾಗಿದೆ ಎಂದು ಕೆಲವು ವೆಬ್‌ಸೈಟ್‌ಗಳು ವರದಿ ಪ್ರಕಟಿಸಿವೆ. ಮೇಲಿನ ಸುದ್ದಿ ಹಾಗೂ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅಶೋಕ್ ಜಿಲ್ಲಾಸ್ಪತ್ರೆಯ ವತಿಯಿಂದ ನೀಡಿದ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ರಕ್ತ ಹಾಗೂ ರಕ್ತ ಘಟಕಗಳ ವಿತರಣೆಯನ್ನು ಕರ್ನಾಟಕ ಸರ್ಕಾರದಿಂದ ಜಾರಿಯಲ್ಲಿರುವ ಮಾರ್ಗಸೂಚಿ, ಡ್ರಗ್ಸ್ ಮತ್ತು ಕಾಸ್ಮಿಟಿಕ್ ಆ್ಯಕ್ಟ್ 1940ಕ್ಕೆ ಸಂಬಂಧಿತ ನಿಯಮಗಳು ಹಾಗೂ ರಕ್ತ ಕೇಂದ್ರದ ಪ್ರಮಾಣಿತ ಕಾರ್ಯವಿಧಾನಗಳ ಅನುಸಾರ ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತದೆ.
ಪ್ರತಿ ಯೂನಿಟ್ ರಕ್ತ ಅಥವಾ ರಕ್ತ ಘಟಕವನ್ನು ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ, ನಿಗದಿತ ನೋಂದಣಿ ಗಳನ್ನು ಪೂರ್ಣಗೊಳಿಸಿದ ನಂತರವೇ ವಿತರಿಸಲಾಗುತ್ತದೆ. ಯಾವುದೇ ರಕ್ತ ಅಥವಾ ರಕ್ತ ಘಟಕವನ್ನು ದಾಖಲಾತಿ ಗಳಿಲ್ಲದೆ ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಮತ್ತು ಅದರ ಪ್ರಕಾರವೇ ಬ್ಲಡ್ ಸ್ಟೋರೆಜ್ ಯುನಿಟ್ ನಿರ್ವಹಿ ಸುತ್ತಿರುವ ಅದರ್ಶ ಆಸ್ಪತ್ರೆಗೆ ಸರಕಾರದ ಮಾರ್ಗಸೂಚಿಗಳ ಅನ್ವಯ ರಕ್ತವನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳಾಗಿದ್ದು, ಈ ಸಂಬಂದ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿದೆ. ಇದರ ಬಗ್ಗೆ ಕೂಲಂಕಷ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲು ಪೊಲೀಸರನ್ನು ಕೋರಲಾಗಿದೆ ಎಂದು ಡಾ.ಅಶೋಕ್ ತಿಳಿಸಿದ್ದಾರೆ.