×
Ad

ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ ಶೇ.89.5 ರಷ್ಟು ಗಣತಿ ನಮೂನೆ ವಿತರಣೆ

ಬಿಎಲ್‌ಒಗಳಿಗೆ ತಲಾ 8000 ರೂ. ಗೌರವಧನ ಬಿಡುಗಡೆ

Update: 2026-07-09 19:57 IST

ಉಡುಪಿ, ಜು.9: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಮತದಾರರಿಗೆ ವಿತರಿಸುವ ಕಾರ್ಯ ಭರದಿಂದ ನಡೆಯುತಿದ್ದು, ಗುರುವಾರದವರೆಗೆ ಒಟ್ಟು ಗುರಿಯಲ್ಲಿ ಶೇ.89.5 ರಷ್ಟು ಫಾರಂಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ವಿತರಿಸಿದ್ದಾರೆ. ಇದರೊಂದಿಗೆ 58,500 ಮಂದಿ ಭರ್ತಿ ಮಾಡಿದವರ ಗಣತಿ ನಮೂನೆಯನ್ನು ಸಹ ಅವರು ಸಂಗ್ರಹಿಸಿದ್ದಾರೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಜುಲೈ 9ರವರೆಗೆ ಉಡುಪಿ ಜಿಲ್ಲೆಯಲ್ಲಿ ವಿತರಿಸಬೇಕಾದ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳಲ್ಲಿ 9,51,491 ಫಾರ್ಮ್ ಗಳನ್ನು ಮತದಾರರಿಗೆ ವಿತರಿಸಲಾಗಿದೆ. ಇವರಲ್ಲಿ ಫಾರಂ ಭರ್ತಿ ಮಾಡಿದವರ ಪೈಕಿ 58,500 ಮಂದಿಯ ಗಣತಿ ನಮೂನೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 407 ಮಂದಿ ಮತದಾರರು ಮೃತಪಟ್ಟಿರುವುದು ಈವರೆಗಿನ ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ 243 ಮಂದಿ ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 80 ಮಂದಿ ಮತದಾರರು ಆನ್‌ಲೈನ್ ಮೂಲಕ ಸ್ವದಾಖಲಾತಿ ಯನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಮೃತ ಮತದಾರರು ಪತ್ತೆಯಾಗಿರುವುದು ಬೈಂದೂರು ಕ್ಷೇತ್ರದಲ್ಲಿ. ಇಲ್ಲಿ 140 ಮಂದಿ ಮತದಾ ರರು ಮೃತರಾಗಿರುವುದು ಪತ್ತೆಯಾಗಿದೆ. ಉಳಿದಂತೆ ಉಡುಪಿಯಲ್ಲಿ 129 ಮಂದಿ, ಕಾಪುವಿನಲ್ಲಿ 63, ಕುಂದಾಪುರ ದಲ್ಲಿ 54 ಮತ್ತು ಕಾರ್ಕಳದಲ್ಲಿ 22 ಮಂದಿ ಮತದಾರರು ಸತ್ತಿರುವುದು ಮನೆ ಭೇಟಿ ವೇಳೆ ಪತ್ತೆಯಾಗಿದೆ. ವರ್ಗಾವಣೆ ಗೊಂಡವರಲ್ಲಿ 100 ಮಂದಿ ಉಡುಪಿಯಲ್ಲಿ, 57 ಮಂದಿ ಬೈಂದೂರು, 54 ಮಂದಿ ಕುಂದಾಪುರದಲ್ಲಿ ಹಾಗೂ ಕಾರ್ಕಳದಲ್ಲಿ ಇಬ್ಬರು ಮಾತ್ರ ಬೇರೆಡೆ ವರ್ಗಾವಣೆ ಗೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಕಾರ್ಯದ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾ ರಕರು ಭಾಗವಹಿಸಿದ್ದರು. ಬಳಿಕ ಕಾರ್ಕಳದಲ್ಲೂ ಇದೇ ಸಭೆ ನಡೆಯಿತು.

ಸಾರ್ವಜನಿಕರು ಆನ್‌ಲೈನ್ ಮೂಲಕವೂ ತಮ್ಮ ವಿವರಗಳನ್ನು ಭರ್ತಿ ಮಾಡಬಹುದು ಅಥವಾ ನವೀಕರಿಸಿಕೊಳ್ಳ ಬಹುದಾಗಿದೆ. ಅರ್ಹ ಮತದಾರರು ವೋಟರ್ ಸರ್ವಿಸ್ ಪೋರ್ಟಲ್ (ವಿ.ಎಸ್.ಪಿ) - voters.eci.gov.in- /ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ -https://play.google.com/store/apps/details?id=com.eci.citizen- ಮೂಲಕ ನೋಂದಣಿ ಮಾಡಿ ಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜು.9ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ:-

ವಿಧಾನಸಭಾಕ್ಷೇತ್ರ         ಒಟ್ಟು ಮತದಾರರು          ವಿತರಿಸಿದ ನಮೂನೆ

118.ಬೈಂದೂರು             2,41,863                     2,24,310

119.ಕುಂದಾಪುರ             2,12,473                     1,98,866

120.ಉಡುಪಿ                 2,21,680                        1,76,660

121.ಕಾಪು                    1,94,718                         1,72,444

122.ಕಾರ್ಕಳ                 1,93,142                         1,82,365

ಒಟ್ಟು                             10,63,876                        9,51,491

ಎಸ್‌ಐಆರ್: ಬಿಎಲ್‌ಒಗಳಿಗೆ ತಲಾ 8000ರೂ. ಗೌರವಧನ ಬಿಡುಗಡೆ

ಉಡುಪಿ: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಮತದಾರರ ಮನೆಮನೆಗೆ ತಲುಪಿಸಿ ಬಳಿಕ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳಿಗೆ ಈ ಕಾರ್ಯಕ್ಕಾಗಿ ತಲಾ 8,000ದಂತೆ ಗೌರವಧನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ರಾಜ್ಯ ಮುಖ್ಯ ಚನಾವಣಾಧಿಕಾರಿಯವರು ಜಿಲ್ಲೆಯ ಪ್ರತಿಯೊಬ್ಬ ಬಿಎಲ್‌ಒಗೆ ತಲಾ 8,000ರೂ.ಗಳಂತೆ ಜಿಲ್ಲೆಯ ಒಟ್ಟು 1,112 ಮಂದಿ ಬಿಎಲ್‌ಒಗಳಿಗೆ ವಿತರಿಸಲು ಉಡುಪಿ ಜಿಲ್ಲೆಗೆ 88,96,000 ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 246 ಮತಗಟ್ಟೆಗಳಿಗೆ 246 ಮತ ಗಟ್ಟೆ ಅಧಿಕಾರಿಗಳಿಗೆ ಅವರಿಗೆ ಒಟ್ಟು 19.68 ಲಕ್ಷ ರೂ., ಕುಂದಾಪುರ ಕ್ಷೇತ್ರದ 222 ಮತಗಟ್ಟೆಗಳ 222 ಬಿಎಲ್‌ಒಗಳಿಗೆ 17,76,000ರೂ., ಉಡುಪಿ ಕ್ಷೇತ್ರದ 226 ಮತಗಟ್ಟೆಗಳ 226 ಬಿಎಲ್‌ಒಗಳಿಗೆ 18,08,000 ರೂ.ಬಿಡುಗಡೆಗೊಂಡಿದೆ.

ಕಾಪು ವಿಧಾನಸಭಾ ಕ್ಷೇತ್ರದ 209 ಮತಗಟ್ಟೆಗಳ 209 ಬಿಎಲ್‌ಒಗಳಿಗೆ 16,72,000ರೂ. ಹಾಗೂ ಕಾರ್ಕಳ ಕ್ಷೇತ್ರದ 209 ಮತಗಟ್ಟೆಗಳ 209 ಬಿಎಲ್‌ಒಗಳಿಗೆ 16,72,000ರೂ. ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1112 ಮತಗಟ್ಟೆಗಳ ಬಿಎಲ್‌ಒಗಳಿಗೆ ವಿತರಿಸಲು ಒಟ್ಟು 88,96,000ರೂ.ಗಳನ್ನು ಆಯಾ ತಹಶೀಲ್ದಾರ್‌ಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News