ರೋಸ್ಟರ್ ಪದ್ಧತಿಯಂತೆ ಮೀಸಲಾತಿ ಹಂಚಿಕೆಗೆ ಕ್ರಮ: ಉಡುಪಿ ಡಿಸಿ ಸ್ವರೂಪ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಿತರಕ್ಷಣಾ -ಕುಂದುಕೊರತೆ ಸಭೆ

Update: 2026-07-28 20:33 IST

ಉಡುಪಿ, ಜು.28: ಸಹಕಾರಿ ಸಂಘಗಳ ನೇಮಕಾತಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಅಂಗಡಿ ಕೋಣೆಗಳ ಏಲಂ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಟೆಂಡರ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿಯಮಾನುಸಾರ ರೋಸ್ಟರ್ ಪದ್ಧತಿಯಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತ ರಕ್ಷಣಾ ಹಾಗೂ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡರಾದ ಜಯನ್ ಮಲ್ಪೆ, ಪ್ರಶಾಂತ್ ತೊಟ್ಟಂ, ಮಲ್ಪೆ ಭಾಗದಲ್ಲಿ ನೂರಾರು ಎಸ್‌ಸಿ ಎಸ್‌ಟಿ ಕುಟುಂಬಗಳು ವಾಸಿಸುತ್ತಿವೆ. ಅವರ ಜೀವನೋಪಾಯಕ್ಕಾಗಿ ಬೀಚ್‌ಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯ ಅಂಗಡಿ ಕೋಣೆಗಳನ್ನು ಏಲಂ ಮಾಡುವಾಗ ಎಸ್‌ಸಿಎಸ್‌ಟಿ ಸಮು ದಾಯದವರಿಗೂ ನಿಯಮಾನುಸಾರ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅದೇ ರೀತಿ ವಾಟರ್ ಸ್ಪೋರ್ಟ್ಸ್, ಪ್ರವಾಸಿ ದೋಣಿ ಸೇರಿದಂತೆ ಮತ್ತಿತರ ಪ್ರವಾಸೋದ್ಯಮ ಚಟುವಟಿಕೆಗಳ ಟೆಂಡರ್‌ಗಳಲ್ಲಿಯೂ ಮೀಸಲಾತಿ ಕಲ್ಪಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಬದಲು ಮುಂಬರುವ ದಿನಗಳಲ್ಲಿ ಇದನ್ನು ಪರಿಗಣಿಸಿ, ಅವಕಾಶ ಕಲ್ಪಿಸಬೇಕು ಎಂದರು.

ನೇಮಕಾತಿಯಲ್ಲಿ ಕೊರಗರಿಗೆ ಆದ್ಯತೆ

ಜಿಲ್ಲೆಯ ಲ್ಯಾಂಪ್ಸ್ ಸೊಸೈಟಿಗಳಲ್ಲಿ ಕೊರಗ ಸಮುದಾಯದವರಿಗೂ ಉದ್ಯೋಗಾವಕಾಶಗಳನ್ನು ನೀಡಬೇಕೆಂದು ಗಣೇಶ್ ಬಾರಕೂರು ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಮುಂಬರುವ ದಿನಗಳಲ್ಲಿ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಾಗ ಕೊರಗ ಸಮುದಾಯದವರಿಗೆ ಆದ್ಯತೆಯ ಮೇಲೆ ನೇಮಕಾತಿಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಜಿಲ್ಲಾಧಿಕಾರಿ ತಿಳಿಸಿದರು.

ಕೊರಗ ಸಮುದಾಯವನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು ಎಂಬುದಾಗಿ ಸರಕಾರ ಗುರುತಿಸಿರುವುದ ರಿಂದ ನೇಮಕಾತಿಯಲ್ಲಿ ಕೊರಗರಿಗೆ ಆದ್ಯತೆ ನೀಡಬೇಕು. ಆದರೆ ಜಿಲ್ಲೆಯ ಐಟಿಡಿಪಿ ಸೇರಿದಂತೆ ಯಾವುದೇ ಇಲಾಖೆಯಲ್ಲೂ ಕೊರಗರಿಗೆ ಹುದ್ದೆ ನೀಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದು ಕೊರಗ ಮುಖಂಡರಾದ ಸುಶೀಲಾ ನಾಡ ಒತ್ತಾಯಿಸಿದರು.

ಗ್ರಾಪಂ ಶೇ.25ರ ಮೀಸಲಿರಿಸಿರುವ ಅನುದಾನದಲ್ಲಿ ಎಸ್‌ಸಿಎಸ್‌ಟಿ ಸಮುದಾಯದವರಿಗೆ ಶವ ಸಂಸ್ಕಾರ ನೆರವೇರಿಸಲು 5000ರೂ. ನೀಡ ಲಾಗುತ್ತಿತ್ತು. ಆದರೆ ಇದು ಸಾಕಾಗುತ್ತಿಲ್ಲ. ಈ ಮೊತ್ತವನ್ನು 15000 ರೂ.ಗೆ ಹೆಚ್ಚಿಸಬೇಕೆಂದು ದಲಿತ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾತಿ ಪ್ರಮಾಣಪತ್ರಕ್ಕೆ ವಿರೋಧ

ಪರಿವಾರ ನಾಯಕ ಜಾತಿಯವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವ ವಿಚಾರವಾಗಿ ಸಭೆಯಲ್ಲಿ ಗದ್ದಲ ಉಂಟಾಯಿತು. ದಲಿತ ಮುಖಂಡರಾದ ಸುಂದರ್ ಮಾಸ್ತರ್, ಮಂಜುನಾಥ್ ಗಿಳಿಯಾರು, ಶ್ಯಾಮ್ ರಾಜ್ ಬಿರ್ತಿ ಸೇರಿದಂತೆ ಹಲವು ಮಂದಿ ಪರಿವಾರ ನಾಯಕ ಜಾತಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಸರಕಾರವು ಪರಿವಾರ ನಾಯಕ ಜಾತಿಯನ್ನು ಪರಿಶಿಷ್ಟ ಪಂಗಡವಾಗಿ ಪರಿಗಣಿಸಿ, ಅಧಿಸೂಚನೆ ಹೊರಡಿಸಿದ್ದು, ಕೆಲವರು ಪರಿವಾರ ನಾಯಕ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ಇನ್ನೂ ಕೆಲವರು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೂ ನೀಡುತ್ತಿಲ್ಲ ಎಂದು ಸಮುದಾಯದವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲುರು, ಪರಿವಾರ ನಾಯಕ ಜಾತಿಯವರಲ್ಲಿಯೇ ಈ ಬಗ್ಗೆ ಗೊಂದಲ ಇದೆ. ಹಾಗಾಗಿ ಎಸ್‌ಟಿ ಇಲಾಖೆಗೆ ಈ ಬಗ್ಗೆ ಸ್ಪಷ್ಟನೆ ಕೋರಿ ಪತ್ರ ಬರೆಯ ಲಾಗಿದೆ. ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ ಸದ್ಯ ಪ್ರಮಾಣಪತ್ರ ವಿತರಿಸಲು ಅವಕಾಶ ಇಲ್ಲ ಎಂದರು.

ಉಲ್ಲಂಘಿಸಿದರೆ ಸೂಕ್ತ ಕ್ರಮ

ಸರಕಾರ ಎಸ್‌ಸಿಎಸ್‌ಟಿ ಪಂಗಡವರು ವಾಸಿಸುವ ಕಾಲೋನಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ವನ್ನು ಸರಕಾರ ಮೀಸಲಿರಿಸಿರುತ್ತದೆ. ಆದರೆ ಸರಕಾರದ ನಿಯಮಾನುಸಾರ ಅವರ ಕಾಲೋನಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದೇ ಇತರರು ವಾಸಿಸುವ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮುಖಂಡರು ದೂರಿದರು. ಇದಕ್ಕೆ ಉತ್ತರಿಸಿದ ನಿಯಮ ಉಲ್ಲಂಘಿಸಿ, ಕಾಮಗಾರಿ ಕೈಗೊಂಡಲ್ಲಿ ಅಂತವರ ಮೇಲೆ ನಿಯಮನು ಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರುಗಳು, ನಿವೇಶನ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ಡಿಸಿ ಮನ್ನಾ ಜಮೀನು ಹಂಚಿಕೆ ಮಾಡುವಂತೆ, ಪರಿಸರ ವಿರೋಧಿ ಗುಡಿ ಕೈಗಾರಿಕೆಯ ಪರವಾನಿಗೆ ರದ್ದುಪಡಿಸುವಂತೆ, ಎಸ್‌ಸಿಎಸ್‌ಟಿ ಅನುದಾನ ದುರುಪಯೋಗ ಆಗದಂತೆ, ಕಾಮಗಾರಿ ಟೆಂಡರ್ ಕರೆಯುವಾಗ ಮೀಸಲಾತಿ ಕಲ್ಪಿಸುವ ಬಗ್ಗೆ, ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಬಗ್ಗೆ, ಕಾಲೋನಿಗಳ ಜನರಿಗೆ ಫ್ಯಾಕ್ಟರಿಗಳಿಂದ ಹೊರ ಸೂಸುವ ತ್ಯಾಜ್ಯದಿಂದ ಆಗುವ ಅನಾನುಕೂಲದ ಬಗ್ಗೆ, ನಿವೇಶನ ಮಂಜೂರು ಮಾಡುವ ಬಗ್ಗೆ ಸೇರಿದಂತೆ ವಿವಿದ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿಎಫ್‌ಓ ರುಥ್ರೇನ್ ಪಿ., ಸಹಾಯಕ ಕಮಿಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಧಾಕರ್ ನಾಯ್ಕ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರ್‌ಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿರುವ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರುಗಳನ್ನು ನೇಮಕ ಮಾಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಸರಕಾರಿ ಯೋಜನೆಯ ಸೌಲಭ್ಯಗಳಿಗೆ ಆಯ್ಕೆಯಾಗಿ ಸ್ವ-ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ನೀಡಲು ಬ್ಯಾಂಕ್‌ಗಳಿಗೆ ವಿವಿಧ ಇಲಾಖೆಗಳಿಂದ ಶಿಫಾರಸ್ಸು ಮಾಡಿ, ಅರ್ಜಿಗಳನ್ನು ಕಳುಹಿಸಿದಾಗ ಅವರುಗಳ ಆರ್ಥಿಕ ನೆರವುಗಳನ್ನು ನೀಡಲು ಸತಾಯಿಸದೇ ಅರ್ಜಿಗಳನ್ನು ಆದ್ಯತೆಯ ಮೇಲೆ ಪರಿಶೀಲಿಸಿ ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ಜೀವಿಸಲು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ ತಾಲೂಕುಗಳಲ್ಲಿ ಲಭ್ಯವಿರುವ ಡಿ.ಸಿ ಮನ್ನಾ ಜಾಗವನ್ನು ಗುರುತಿಸಿ, ಅರ್ಹ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಹಂಚಿಕೆ ಮಾಡಲು ತಾಲೂಕಿನ ತಹಶೀಲ್ದಾರರುಗಳು ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.

ಹೆಲ್ತ್ ಕಾರ್ಡ್ ಕಂಪೆನಿ ಕೈಬಿಡಲು ಪಟ್ಟು

ಉಡುಪಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 4350ಕ್ಕೂ ಹೆಚ್ಚು ಜನರಿಗೆ ಆರೋಗ್ಯ ವಿಮೆಯ ಹೆಲ್ತ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. 130 ಮಂದಿಗೆ ತಾಂತ್ರಿಕ ಸಮಸ್ಯೆಯಿಂದ ವಿತರಿಸಿಲ್ಲ ಎಂದು ಪೌರಾಯುಕ್ತ ಮಹಾಂತೇಶ್ ಹಂಗರಗಿ ತಿಳಿಸಿದರು.

ಆರೋಗ್ಯ ವಿಮೆಯು ಎಚ್‌ಡಿಎಫ್‌ಸಿ ಕಂಪನಿಗೆ ನೀಡಲಾಗಿದ್ದು, ಕೆಲವು ತಾಂತ್ರಿಕ ತೊಂದರೆ ಸೇರಿದಂತೆ ಮತ್ತಿತರ ಕಾರಣಗಳಿಂದ ಈ ಯೋಜನೆಗಳ ಲಾಭವನ್ನು ಸರಿಯಾಗಿ ಪಡೆಯಲು ಆಗುತ್ತಿಲ್ಲ. ಆದುದರಲಿಂದ ಈ ಕಂಪೆನಿ ಯನ್ನು ರದ್ಧುಪಡಿಸಿ ಬೇರೆ ಕಂಪೆನಿಗೆ ವಹಿಸಿಕೊಡಬೇಕೆಂದು ಮುಖಂಡರು ಸಭೆಯಲ್ಲಿ ಪಟ್ಟು ಹಿಡಿದರು. ಪ್ರಸ್ತುತ ಮುಂದಿನ ಸಾಲಿನಲ್ಲಿ ವಿಮಾ ಹೆಲ್ತ್ ಕಾರ್ಡ್‌ಗಳನ್ನು ಉತ್ತವಾಗಿ ಸೇವೆ ನೀಡುವ ಕಂಪೆನಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News