ಕರಾವಳಿಯಲ್ಲಿ ಮೂರು ದಿನ ಭಾರೀ ಮಳೆ ಮುನ್ಸೂಚನೆ: ಹವಾಮಾನ ಇಲಾಖೆ
Update: 2026-07-28 20:36 IST
ಉಡುಪಿ, ಜು.28: ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅಲ್ಲಲ್ಲಿ ಸಾಧಾರಣ ದಿಂದ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲವು ಕಡೆಗಳಲ್ಲಿ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೂ ಬೀಸುವ ಸಾಧ್ಯತೆಯ ಕುರಿತು ಅದು ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಸಹ ಆಗಾಗ ಮಳೆ ಸುರಿಯುತಿದ್ದು, ಒಂದೆರಡು ಬಾರಿ ಮಳೆಯೊಂದಿಗೆ ಜೋರಾದ ಗಾಳಿಯೂ ಬೀಸುತ್ತಿತ್ತು. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 45.8ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ 57.0ಮೀ.ಮೀ., ಹೆಬ್ರಿಯಲ್ಲಿ 53.6, ಉಡುಪಿಯಲ್ಲಿ 49.5, ಕುಂದಾಪುರದಲ್ಲಿ 45.5, ಬ್ರಹ್ಮಾವರದಲ್ಲಿ 36.7, ಬೈಂದೂರಿನಲ್ಲಿ 35.7 ಹಾಗೂ ಕಾಪುವಿನಲ್ಲಿ 33.0 ಮಿ.ಮೀ. ಮಳೆಯಾದ ವರದಿಗಳು ಬಂದಿವೆ.