ಶಾಸಕ ಯಶ್‌ಪಾಲ್ ಸುವರ್ಣರ ಅಸಂವಿಧಾನಿಕ ನಡೆ ಖಂಡನೀಯ: ಸಹಬಾಳ್ವೆ ಉಡುಪಿ ಜಿಲ್ಲೆ
ಉಡುಪಿ: ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಧ್ವೇಷದ ಭಾಷಣ ಮಾಡುವ ಮೂಲಕ ವಿವಾದ ಸೃಷ್ಠಿಸಿದ್ದಾರೆ, ಅವರ ಅಸಂವಿಧಾನಿಕ ನಡೆ ಖಂಡನೀಯವಾಗಿದೆ ಎಂದು ಸಹಬಾಳ್ವೆ ಉಡುಪಿ ಜಿಲ್ಲೆ ಪ್ರಕಟನೆಯಲ್ಲಿ ತಿಳಿಸಿದೆ.
CJP ವೇದಿಕೆಯ ಅಡಿ, ನಿರಂತರ ಶಾಂತಿಯುತ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾಡಿದ ವಿದ್ಯಾರ್ಥಿ ಯುವ ಜನರ ಚಳುವಳಿಯು ದೇಶದ ಪ್ರಜಾಪ್ರಭುತ್ವ ಜೀವಿತದಲ್ಲಿ ಮಹತ್ವದ ಘಟನೆ ಆಗಿದೆ. ತನ್ನ ಮೊಂಡುತನವನ್ನು ಕೊನೆಗೂ ಬಿಡಬೇಕಾಗಿ ಬಂದ ಸನ್ನಿವೇಶವನ್ನು ವಿನಯದಿಂದ ಸ್ವೀಕರಿಸದೆ, ಕೇಂದ್ರದಲ್ಲಿ ಆಡಳಿತದ ಭಾಗವಾಗಿರುವ ಬಿ.ಜೆ.ಪಿ. ಪಕ್ಷವು, CJP ಚಳುವಳಿಗಾರರು ಹಾಗು ಅವರನ್ನು ಬೆಂಬಲಿಸಿದ ಪ್ರಜಾಪ್ರಭುತ್ವವಾದಿಗಳ ವಿರುದ್ಧ ಅವಮಾನಕರ ಸಭೆ ನಡೆಸಿರುವುದು, ಅದರ ನಾಚಿಕೆಗೇಡು ನಡುವಳಿಕೆಗೆ ಮತ್ತೊಂದು ಉದಾಹರಣೆ ಆಗಿದೆ.
ಉಡುಪಿಯಲ್ಲಿ ಮಂಗಳವಾರ ಬಿ.ಜೆ.ಪಿ. ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ ಚಳುವಳಿಗಾರರು, ಲೋಕ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗು ಚಳುವಳಿಯನ್ನು ಬೆಂಬಲಿಸಿದ ನಟ ಪ್ರಕಾಶ್ ರಾಜ್ ಅವರ ವಿರುದ್ಧ ಕ್ರಿಮಿನಲ್ ಅಪರಾಧ ಎಸಗುವ ಮಾತನಾಡಿದ್ದಾರೆ. ಜೊತೆಗೆ ಮಣಿಪಾಲ ಮಾಹೆ ವಿವಿಯ ಅಧ್ಯಾಪಕರ ವಿರುದ್ಧ ನಿರಾಧಾರವಾದ ಕ್ರಿಮಿನಲ್ ಆರೋಪ ಮಾಡಿದ್ದಾರೆ.
ಶಾಸಕರಿಗೆ ತಮ್ಮ ಸ್ಥಾನಮಾನದ ಘನತೆಯ ಅರಿವು ಇಲ್ಲ ಎನ್ನುವುದನ್ನು ಹಿಂದೆ ಹಲವು ಬಾರಿ ಜಾಹೀರು ಮಾಡಿದ್ದರು. ಈಗ ಮತ್ತದೇ ಕ್ರಿಮಿನಲ್ ವರ್ತನೆ ತೋರಿರುವುದು ಖಂಡನೀಯ. ಶಾಸಕರು ಯಾವ ಪಕ್ಷದವರೇ ಆಗಿರಲಿ, ಅವರು ತಮ್ಮ ಹುದ್ದೆಯ ಘನತೆಯ ಹದ್ದು ಮೀರಿ ನಡೆದಾಗ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದದ್ದು ಸರಕಾರದ ಸಂವಿಧಾನ ಬದ್ಧ ಕರ್ತವ್ಯ. ಕರ್ನಾಟಕ ಸರಕಾರದ ಗೃಹ ಮಂತ್ರಾಲಯ ಉಡುಪಿ ಶಾಸಕರ ಪ್ರಸ್ತುತ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ, ಕಾನೂನುಕ್ರಮ ಜರುಗಿಸಬೇಕು ಎಂದು ಸಂಚಾಲನ ಸಮಿತಿಯ ಪರವಾಗಿ ಪ್ರಧಾನ ಸಂಚಾಲಕರಾದ ಕೆ.ಫಣಿರಾಜ್ ಅವರು ತಿಳಿಸಿದ್ದಾರೆ.