ಉಡುಪಿ: ಕೌಶಲ್ಯಾಭಿವೃದ್ಧಿ ಬೂಟ್ ಕ್ಯಾಂಪ್‌ಗೆ ಚಾಲನೆ

Update: 2026-07-30 19:28 IST

ಉಡುಪಿ, ಜು.30: ಉದ್ಯೋಗ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೌಶಲ್ಯದ ಕೊರತೆಯಿಂದ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಸಂವಹನ ಕೌಶಲ್ಯ, ನೆಟ್ವರ್ಕಿಂಗ್ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಂದಿನ ಉದ್ಯೋಗಾಕಾಂಕ್ಷಿಗಳಿಗೆ ಅತ್ಯಗತ್ಯ ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ.ಶ್ರೀಶ ಭಟ್ ಹೇಳಿದ್ದಾರೆ.

ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಡುವೆ ಪರಸ್ಪರ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಉದ್ಯೋಗಾರ್ಹತೆ ವೃದ್ಧಿಸುವ ಉದ್ದೇಶದ ಎರಡು ದಿನಗಳ ಸ್ಕಿಲ್ ಎಡ್ಜ್ ಕರಿಯರ್ ರೆಡಿನೆಸ್ ಬೂಟ್ ಕ್ಯಾಂಪ್’ಗೆ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಸಂತೋಷ್ ಪ್ರಭು ಎಂ., ಕಾಲೇಜು ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಡುವಿನ ಪರಸ್ಪರ ಸಹಕಾರದ ಒಪ್ಪಂದದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

ಎರಡು ದಿನಗಳ ಶಿಬಿರದಲ್ಲಿ ನೇಮಕಾತಿ ಪ್ರಕ್ರಿಯೆ, ವೃತ್ತಿಪರ ಸಂವಹನ ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ ಸ್ವಯಂಸೇವಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಭಟ್ ಹಾಗೂ ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News